ನವದೆಹಲಿ: ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯಲ್ಲಿರುವ ನವೆಂಬರ್ ಕ್ರಾಂತಿ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯಾವ ನವೆಂಬರ್ ಕ್ರಾಂತಿಯೂ ಆಗುವುದಿಲ್ಲ. ನವೆಂಬರ್ ನಲ್ಲಿಯೂ ಕ್ರಾಂತಿಯಾಗಲ್ಲ, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿಯೂ ಕ್ರಾಂತಿಯಾಗಲ್ಲ. ಕ್ರಾಂತಿಯಾಗುತ್ತದೆ, ಯಾವಾಗ 2028ರ ಚುನಾವಣೆಯಲ್ಲಿ ಕ್ರಾಂತಿಯಾಗಲಿದೆ ಎಂದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕ್ರಾಂತಿಯಾಗಿ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿಯಾಗಲಿದೆ ಎಂದು ಹೇಳಿದರು. ಅಲ್ಲಿಯವರೆಗೂ ಯಾವ ಕ್ರಾಂತಿಯೂ ಇಲ್ಲ, ಬದಲಾವಣೆಯೂ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರವಾಗಿ, ನಾಯಕತ್ವ ಬದಲಾವಣೆ ಬಗ್ಗೆ ನಾನು ಮಾತನಾಡಿದ್ದೇನಾ? ನಾನಾಗಲಿ, ಸಿಎಂ ಸಿದ್ದರಾಮಯ್ಯ ಅವರಾಗಲಿ ಈ ಬಗ್ಗೆ ಮಾತನಾಡಿದ್ದೇವಾ? ನಾನೇನಾದರೂ ಸಿಎಂ ಬದಲಾವಣೆ ಬಗ್ಗೆ ಹೇಳಿದ್ದೇನಾ? ಎಂದು ಪ್ರಶ್ನಿಸಿದರು.
ನಾವು ಪಕ್ಷ ಏನು ಹೇಳುತ್ತೆ ಕೇಳಿಕೊಂಡು ಹೋಗುತ್ತೇವೆ. ಯಾವ ಬದಲಾವಣೆಯೂ ಇಲ್ಲ. ಹೈಕಮಾಂಡ್ ನಾಯಕರು ಏನು ಹೇಳುತ್ತಾರೆ ಹಾಗೆ ನಡೆದುಕೊಂಡು ಹೋಗುತ್ತೇವೆ ಎಂದರು.
