ರಾಯಚೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬೆಳ್ಳಂಬೆಳಿಗ್ಗೆ ಕುಟುಂಬಸಮೇತರಾಗಿ ಮಂತ್ರಾಲಯಕ್ಕೆ ತೆರಳಿ ಗುರುರಾಯರ ದರ್ಶನ ಪಡೆದರು. ಈ ವೇಳೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ವಿಶೇಶ ಪೂಜೆ ಬಳಿಕ ರಾಯರ ಮೂಲ ಬೃಂದಾವನ ಬಳಿ ಕೆಲಹೊತ್ತು ಕುಳಿತು ಡಿಸಿಎಂ ಎಂ ಡಿ.ಕೆ.ಶಿವಕುಮಾರ್ ಪ್ರಾರ್ಥನೆ ಮಾಡಿದರು. ಬಳಿಕ ಶ್ರೀ ಸುಬುಧೇಂದ್ರ ಶ್ರೀಗಳ ಆಶಿರ್ವಾದ ಪಡೆದು ಫಲ-ಮಂತ್ರಾಕ್ಷತೆಗಳನ್ನು ಪಡೆದರು. ಈ ವೇಳೆ ಡಿಸಿಎಂ ಅವರಿಗೆ ಶ್ರೀ ಸುಬುಧೇಂದ್ರ ತೀರ್ಥರು ಶಾಲು ಹೊದಿಸಿ ಸನ್ಮಾನಿಸಿದರು.
ಗುರು ರಾಯರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹಲವುಬಾರಿ ಮಂತ್ರಾಲಯಕ್ಕೆ ಬಂದು ಗುರು ರಾಘವೆಂದ್ರ ಸ್ವಾಮಿಗಳ ದರ್ಶನ ಪಡೆಯಬೇಕು ಎಂದು ಇದ್ದೆ. ಅನೇಕ ಸಲ ನನಗೆ ಆಹ್ವಾನವೂ ಇತ್ತು. ಆದರೆ ಸಾಧ್ಯವಾಗಿರಲಿಲ್ಲ. ಇಂದು ಕುಟುಂಬ ಸಮೇತ ಬಂದು ರಾಯರ ದರ್ಶನ ಪಡೆಯುವ ಭಾಗ್ಯ ಸಿಕ್ಕಿದೆ. ಇದು ನನ್ನ ಸೌಭಾಗ್ಯ. ಎಲ್ಲದಕ್ಕೂ ಗುರು ರಾಯರ ಅನುಗ್ರಹ ಬೇಕು ಎಂದರು.
ಕರ್ನಾಟಕ ರಾಜ್ಯಕ್ಕೆ ಶಾಂತಿ, ನೆಮ್ಮದಿ ಸಿಗಲಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ಭಾರತ್ ಜೋಡೋ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಬಂದಿದ್ದೆ. ಅಂದು ನಾನು ಹಾಗೂ ರಾಹುಲ್ ಗಾಂಧಿಯವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದೆವು. ಬಳಿಕ ಬರಲು ಆಗಿರಲಿಲ್ಲ. ಈಗ ರಾಯರ ದರ್ಶನ ಪಡೆದಿರುವುದು ಸಂತಸ ತಂದಿದೆ ಎಂದರು.