ಮೈಸೂರು: ಬಿಡದಿ ಸೇರಿದಂತೆ ಏಳು ಕಡೆ ಟೌನ್ ಶಿಪ್ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹರೇ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡಿದರೆ ಯಾವ ನ್ಯಾಯ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಡದಿ ಟೌನ್ ಶಿಪ್ ಗೆ ದೇವೇಗೌಡರು ವಿರೋಧ ವಿಚಾರವಾಗಿ ಮಾತನಾಡುತ್ತಾ, ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಈ ಭಾಗದಲ್ಲಿ ಟೌನ್ ಶಿಪ್ ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಕುಮಾರಸ್ವಾಮಿ. ಅವರೇ ಈ ತೀರ್ಮಾನ ಮಾಡಿ ಡಿಎಲ್ ಎಫ್ ಅವರಿಂದ 300 ಕೋಟಿ ರೂ. ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದರು ಎಂದು ನೆನಪಿಸಿದರು.
ನಾನು ಈಗ ಯಾವುದೇ ಜಮೀನು ಡಿನೋಟಿಫಿಕೇಷನ್ ಮಾಡಲು ತಯಾರಿಲ್ಲ. ಇದು ಮಾಡಿದ ತಕ್ಷಣ ದುಡ್ಡು-ಕಾಸು ಹೊಡೆದರು ಎನ್ನುವ ಆರೋಪ ಬರುತ್ತದೆ. ಈಗಾಗಲೇ ನಾನು ಕೋರ್ಟ್, ಕಚೇರಿ ಅಲೆದು, ಜೈಲು ವಾಸವನ್ನೂ ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀನಿನ ಬಗ್ಗೆಯೂ ಇವರುಗಳೇ ಆರೋಪ ಮಾಡಿದ್ದಾರೆ. ದೇವೇಗೌಡರೇ ನಿಮ್ಮ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರೇ ಯಾಕೆ ಈ ಜಮೀನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗೇಕೆ ಮಾತನಾಡುತ್ತಿದ್ದೀರಿ? ನಾನು ಎಲ್ಲಾ ರೈತರ ಬಳಿ ಮಾತನಾಡಿದ್ದೇನೆ. ಗ್ರೇಟರ್ ಬೆಂಗಳೂರು ನಗರ ಇಡೀ ದೇಶಕ್ಕೇ ಮಾದರಿಯಾಗುವಂತಹ ನಗರವನ್ನಾಗಿ ಮಾಡುತ್ತೇವೆ. ದೆಹಲಿ, ಚಂಡೀಗಡ್ ಮಾದರಿಗಿಂತ ಉತ್ತಮವಾಗಿ 10 ಸಾವಿರ ಎಕರೆಯಲ್ಲಿ ಬೆಂಗಳೂರು ನಗರಕ್ಕಿಂತ ಚೆನ್ನಾಗಿ ರೂಪಿಸಲಾಗುವುದು. ಇದಕ್ಕಾಗಿ ಯೋಜನೆ ಸಿದ್ಧಾವಾಗುತ್ತಿದೆ ಎಂದರು.
ಇಲ್ಲಿ ರೈತರು ತಮ್ಮ ಭೂಮಿ ಮಾರಲೂ ಆಗದೆ, ಅಭಿವೃದ್ಧಿಯನ್ನು ಮಾಡಲಾಗದೇ ಪರದಾಡುತ್ತಿದ್ದಾರೆ. ಏನಾದರೂ ಒಂದು ತೀರ್ಮಾನ ಮಾಡಿ ಎಂದು ರೈತರೇ ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ಅವರು ತಮ್ಮ ಆಸ್ತಿ ಕಳೆದುಹೋಯಿತು ಎನ್ನಬಾರದು, ಜತೆಗೆ ಖುಷಿ ಪಡಬೇಕು. ಭೂಮಿ ಹೋದರೂ ಉತ್ತಮ ಉತ್ತಮ ಪರಿಹಾರ ನೀಡಿದ್ದಾರೆ ಎನ್ನಬೇಕು. ರೈತರ ಮುಂದೆ ಎರಡು ಆಯ್ಕೆಗಳನ್ನು ನೀಡಿದ್ದು ಭೂಮಿಗೆ ಹಣದ ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ಪರಿವರ್ತಿತ ಭೂಮಿ ಪಡೆಯಬಹುದು ಎಂದು ತಿಳಿಸಿದ್ದೇವೆ. ರಾಜಕೀಯವಾಗಿ ನಾವು ಏನೇ ಮಾಡಿದರೂ ವಿರೋಧ ಮಾಡುತ್ತಾರೆ ಎಂದು ಹೇಳಿದರು.