ಬೆಂಗಳೂರು: ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 4 ಎಂಎಲ್ ಡಿ ಸಾಮರ್ಥ್ಯದ ಜಲಾಗಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಶಂಕುಸ್ಥಾಪನೆ ಮಾಡಿರುವ ಯೋಜನೆ ಸುಮಾರು 30 ಸಾವಿರ ಮನೆಗಳು, 2.50 ಲಕ್ಷ ಜನರಿಗೆ ನೀರು ಪೂರೈಸಲಿದೆ ಎಂದರು.
ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಇದು ಚಾಲನೆಯಾಗಲಿದೆ. ಇದಾದ ತಕ್ಷಣ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗುವುದು. ಪಾಲಿಕೆಯ ಸಹಾಯವಾಣಿ ನೀಡಿ ಬೆಂಗಳೂರಿನಲ್ಲಿ ಎಲ್ಲಿ ಕಸ ಇದೆ ಎಂದು ಸಾರ್ವಜನಿಕರು ಹೇಳಿದರೂ ಪಾಲಿಕೆ ವತಿಯಿಂದ ಅದನ್ನು ಸ್ವಚ್ಛಗೊಳಿಸಲಾಗುವುದು. ಆಮೂಲಕ ಸ್ವಚ್ಛ ಬೆಂಗಳೂರು ರೂಪಿಸಲಾಗುವುದು ಎಂದರು.
ನಾವು ಕೊಟ್ಟ ಮಾತಿನಂತೆ ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಕೊಟ್ಟ ಭರವಸೆಗಳನ್ನು ಸರಿಯಾಗಿ ಈಡೇರಿಸಿಕೊಂಡು ಬಂದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಅಚ್ಛೇದಿನ ಕೊಡುತ್ತೇವೆ ಎಂದು ಹೇಳಿದ್ದರಲ್ಲಾ ಕೊಟ್ಟರಾ? ಬಿಜೆಪಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಆದಾಯ ಪಾತಾಳಕ್ಕೆ ಕುಸಿದ ಕಾರಣ ನಾವು ಈ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಬೆಲೆ ಏರಿಕೆ ಮಧ್ಯೆ ನಿಮ್ಮ ಜೀವನ ಸುಗಮವಾಗಿ ಸಾಗಬೇಕು ಎಂದು ಈ ಯೋಜನೆ ನೀಡಿದ್ದೇವೆ ಎಂದರು.