ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ವಿಚಾರದಲ್ಲಿ ಬಿಜೆಪಿ ನಾಯಕರ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರಿಗೆ ಬೆಂಗಳೂರು ಅಭಿವೃದ್ಧಿ ಮುಖ್ಯವಲ್ಲ, ರಾಜಕೀಯವೇ ಮುಖ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರು ಜಿಬಿಎ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆ, ದೂರು ಹೇಳಿಕೊಳ್ಳಬಹುದಾಗಿತ್ತು. ಜನ ಅವರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದು, ಆ ಜನರ ಧ್ವನಿಯಾಗಬೇಕಿತ್ತು. ಆದರೆ ಆ ಕೆಲಸ ಮಾಡಲಿಲ್ಲ. ಬದಲಿಗೆ ಜಿಬಿಎ ರದ್ದು ಮಾಡುವುದಾಗಿ ಹೇಳಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಇದುವರೆಗೂ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯೋಜನೆ, ತೀರ್ಮಾನಗಳನ್ನು ಯಾವುದೇ ಸರ್ಕಾರ ಬದಲಿಸಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಜನಪರ ತೀರ್ಮಾನ ಮಾಡುತ್ತೇವೆ. ಮುಂದೆ ಅವರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಅವರು ಈ ಆಲೋಚನೆ ಮಾಡುವುದು ಬೇಡ ಎಂದರು.
ಅವರು ಜಿಬಿಎ ವಿರೋಧಿಸುವುದೇ ಆದರೆ ಪಾಲಿಕೆ ಚುನಾವಣೆ ಬಹಿಷ್ಕರಿಸಲಿ. ಮೇಯರ್ ಅಧಿಕಾರ ಅವಧಿಯನ್ನು ನಾವು ಎರಡೂವರೇ ವರ್ಷಕ್ಕೆ ವಿಸ್ತರಿಸಿದ್ದೇವೆ. ಇನ್ನು ವಾರ್ಡ್ ಸಮಿತಿಗಳಲ್ಲಿ ಐದು ಸಾವಿರ ಸದಸ್ಯರು ಇರುತ್ತಾರೆ. 369 ಪಾಲಿಕೆ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಇದರಲ್ಲಿ 50% ಮಹಿಳೆಯರು ಇರುತ್ತಾರೆ ಎಂದರು.