BIG NEWS: ಕ್ರಿಮಿನಲ್ ಆರೋಪದ ಸರ್ಕಾರಿ ನೌಕರರನ್ನು ವಜಾಗೊಳಿಸಬಹುದು: ಹೈಕೋರ್ಟ್ ಆದೇಶ

ಬೆಂಗಳೂರು: ಸರ್ಕಾರಿ ನೌಕರರಿಗೆ ನೇಮಕವಾಗಲು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಅಡ್ಡಿಯಾದರೆ ಅದೇ ನಿಯಮ ಕ್ರಿಮಿನಲ್ ಆರೋಪ ಹೊತ್ತ ಸರ್ಕಾರಿ ನೌಕರರಿಗೂ ಅನ್ವಯವಾಗುತ್ತದೆ. ಅಂಥವರನ್ನು ಸರ್ಕಾರಿ ನೌಕರಿಯಿಂದ ವಜಾಗೊಳಿಸಬಹುದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲರ ಕಚೇರಿಯಲ್ಲಿ ಎಸ್.ಡಿ.ಎ. ಆಗಿ ಸೇವೆ ಸಲ್ಲಿಸಿ ಶಿಕ್ಷೆಗೊಳಗಾಗಿದ್ದ ನಂಜೇಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿರುವ ಕ್ರಮವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಕ್ರಿಮಿನಲ್ ಪ್ರಕರಣ ಸರ್ಕಾರಿ ಕೆಲಸಕ್ಕೆ ಮಾರಕ. ಆರೋಪಿತರನ್ನು ಸೇವೆಯಿಂದ ವಜಾಗೊಳಿಸಲು ಅಡ್ಡಿಯಿಲ್ಲ ಎಂದು ಹೇಳಲಾಗಿದೆ.

ನೈತಿಕತೆಗೆ ಅಸ್ಥಿರತೆ ಉಂಟುಮಾಡುವಂತಹ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವ ಆಧಾರದಲ್ಲಿ ಸೇವೆಯಿಂದ ವಜಾಗೊಳಿಸಿರುವುದನ್ನು ತಡೆಯಲು ಅವಕಾಶವಿಲ್ಲವೆಂದು ಕರ್ನಾಟಕ ನಾಗರಿಕ ಸೇವೆಗಳ ನಿಯಮ 14ರಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಗಂಭೀರ ಕ್ರಿಮಿನಲ್ ಅಪರಾಧದ ಆರೋಪ ಹೊತ್ತ ಅರ್ಜಿದಾರರ ಕೃತ್ಯ ಅವರ ಅಧಿಕೃತ ಕರ್ತವ್ಯಗಳು ಅಥವಾ ಸೇವಾ ಷರತ್ತುಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಹೀಗಾಗಿ ಅವರನ್ನು ಸರ್ಕಾರಿ ನೌಕರರನ್ನಾಗಿ ಮುಂದುವರೆಸಬೇಕು. ಜೊತೆಗೆ ಗಂಭೀರ ಅಪರಾಧದ ಆರೋಪ ಹೊತ್ತವರನ್ನು ಸರ್ಕಾರಿ ನೌಕರರನ್ನಾಗಿ ಸೇವೆಯಲ್ಲಿ ಮುಂದುವರೆಸಬೇಕು ಎಂಬುದಾಗಿ ಬಯಸುವುದನ್ನು ಒಪ್ಪುವಂತಹುದಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಸರ್ಕಾರಿ ನೌಕರರನ್ನು ಖುಲಾಸೆಗೊಳಿಸಿದ್ದರೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ವಿಚಾರಣೆಗೆ ಒಳಪಡಿಸಬಹುದು. ಆದರೆ, ಅಪರಾಧ ಕೃತ್ಯದಲ್ಲಿ ವಿಚಾರಣೆ ನಡೆದು ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಶಿಸ್ತು ಕ್ರಮಕ್ಕೆ ವಿಚಾರಣೆ ನಡೆಸಬೇಕಾದ ಅಗತ್ಯತೆ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.

2001ರಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ನಂಜೇಗೌಡ ಅವರಿಗೆ 2011ರಲ್ಲಿ ಮಾಗಡಿಯ ವಿಚಾರಣಾ ನ್ಯಾಯಾಲಯ ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದೇಶದ ಪ್ರಕಾರ 2023ರ ನವೆಂಬರ್ 18ರಂದು ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಈ ಆದೇಶ ಪ್ರಶ್ನಿಸಿದ್ಧ ಅರ್ಜಿಯನ್ನು 2024ರ ಅಕ್ಟೋಬರ್ 25ರಂದು ಕೆಎಟಿ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಸೇವೆಯಿಂದ ವಜಾಗೊಳಿಸಿದ ಕ್ರಮವನ್ನು ವಿಭಾಗೀಯ ಪೀಠವೂ ಎತ್ತಿಹಿಡಿದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read