ʼಕೋವಿಡ್ʼ ಸೋಂಕಿತರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮೆದುಳು ಕಾರ್ಯ ಕುಂಠಿತ ಬಗ್ಗೆ ಅಧ್ಯಯನ ಬಹಿರಂಗ

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿರುವ ನಡುವೆ ಮತ್ತೊಂದು ವರದಿ ಬೆಚ್ಚಿಬೀಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯ ದೇಹ ಗುಣವಾದ ನಂತರವೂ ಕೆಲ ವರ್ಷಗಳವರೆಗೆ ತಲೆಬುರುಡೆ ಮತ್ತು ಮೆದುಳಿನ ಪೊರೆಗಳಲ್ಲಿ ವೈರಸ್ ಉಳಿಯುತ್ತದೆ, ಇದು ಮೆದುಳಿನ ಮೇಲೆ ದೀರ್ಘಕಾಲೀನ ಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ಪ್ರಮುಖ ಜರ್ಮನ್ ಅಧ್ಯಯನದ ಪ್ರಕಾರ ಗೊತ್ತಾಗಿದೆ.

ಹೆಲ್ಮ್ಹೋಲ್ಟ್ಜ್ ಮ್ಯೂನಿಚ್ ಮತ್ತು ಲುಡ್ವಿಗ್-ಮ್ಯಾಕ್ಸಿಮಿಲಿಯನ್ಸ್-ಯೂನಿವರ್ಸಿಟಾಟ್ (LMU) ನ ಸಂಶೋಧಕರು, ಸಾರ್ಸ್ ಕೋವಿಡ್ 2 ‘ಸ್ಪೈಕ್ ಪ್ರೋಟೀನ್’ ಮೆದುಳಿನ ರಕ್ಷಣಾತ್ಮಕ ಪದರಗಳಲ್ಲಿ ಉಳಿದಿರುವುದನ್ನು ಕಂಡುಹಿಡಿದಿದ್ದು ಇದು ವಿಶೇಷವಾಗಿ ಮೆನಿಂಜಸ್ ಮತ್ತು ತಲೆಬುರುಡೆಯ ಮೂಳೆ ಮಜ್ಜೆಯಲ್ಲಿ ಕೋವಿಡ್ ಸೋಂಕಿನ ನಂತರದ ನಾಲ್ಕು ವರ್ಷಗಳವರೆಗೆ ಇರುತ್ತದೆ ಎಂದಿದ್ದಾರೆ.

ಈ ಸ್ಪೈಕ್ ಪ್ರೋಟೀನ್‌ಗಳು ಕೊರೊನಾ ಪೀಡಿತ ವ್ಯಕ್ತಿಗಳಲ್ಲಿ ದೀರ್ಘಕಾಲದ ಉರಿಯೂತವನ್ನುಂಟು ಮಾಡುತ್ತವೆ ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧನಾ ತಂಡವು ಕಂಡುಹಿಡಿದಿದೆ.
ಹೆಲ್ಮ್ಹೋಲ್ಟ್ಜ್ ಮ್ಯೂನಿಚ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಇಂಟೆಲಿಜೆಂಟ್ ಬಯೋಟೆಕ್ನಾಲಜೀಸ್‌ನ ನಿರ್ದೇಶಕ ಪ್ರೊ. ಅಲಿ ಎರ್ಟುರ್ಕ್, ದೀರ್ಘಕಾಲೀನ ನರವೈಜ್ಞಾನಿಕ ಪರಿಣಾಮಗಳು ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಐದರಿಂದ 10 ವರ್ಷಗಳ ಕಾಲ ಆರೋಗ್ಯಕರ ಮಿದುಳಿನ ಕ್ರಿಯೆಯ ಕುಂಠಿತಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಜರ್ನಲ್ ಸೆಲ್ ಹೋಸ್ಟ್ & ಮೈಕ್ರೋಬ್‌ನಲ್ಲಿ ಪ್ರಕಟವಾದ ಅಧ್ಯಯನವು ತಲೆನೋವು, ನಿದ್ರಾ ಭಂಗ ಮತ್ತು ಅರಿವಿನ ದುರ್ಬಲತೆಯಂತಹ ದೀರ್ಘಕಾಲದ ಕೋವಿಡ್‌ನ ನರವೈಜ್ಞಾನಿಕ ಲಕ್ಷಣಗಳನ್ನು ಸಹ ಹೊಂದಿರಬಹುದು ಎಂದಿದೆ.
ಕೋವಿಡ್ ಸೋಂಕಿತರಲ್ಲಿ ಸುಮಾರು 5 ರಿಂದ 10 ಪ್ರತಿಶತದಷ್ಟು ಜನರು ದೀರ್ಘ ಕೋವಿಡ್ ಅನ್ನು ಅನುಭವಿಸುವ ಸಾಧ್ಯತೆಯಿದೆ ಸರಿಸುಮಾರು 400 ಮಿಲಿಯನ್ ವ್ಯಕ್ತಿಗಳು ಗಮನಾರ್ಹ ಪ್ರಮಾಣದ ಸ್ಪೈಕ್ ಪ್ರೋಟೀನ್ ಅನ್ನು ಹೊಂದಿರಬಹುದು ಎನ್ನಲಾಗಿದೆ.

ಗಮನಾರ್ಹವಾಗಿ ಮಾರಣಾಂತಿಕ ವೈರಸ್ ವಿರುದ್ಧದ ಲಸಿಕೆಗಳು ಮೆದುಳಿನಲ್ಲಿ ಸ್ಪೈಕ್ ಪ್ರೋಟೀನ್‌ನ ಶೇಖರಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.ಆದಾಗ್ಯೂ ಈ ಕಡಿತದ ಪ್ರಮಾಣ ಕೇವಲ 50 ಪ್ರತಿಶತದಷ್ಟು ಮಾತ್ರ, ಉಳಿದಿರುವ ಸ್ಪೈಕ್ ಪ್ರೋಟೀನ್ ಮೆದುಳಿಗೆ ವಿಷಕಾರಿ ಅಪಾಯವನ್ನುಂಟುಮಾಡುತ್ತದೆ ಎಂದು ತಿಳಿಸಲಾಗಿದೆ.

ಅಧ್ಯಯನಕ್ಕಾಗಿ ಸಾರ್ಸ್ ಕೋವಿಡ್ 2 ಸ್ಪೈಕ್ ಪ್ರೋಟೀನ್ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಂಡವು ಎಐ ಚಾಲಿತ ಇಮೇಜಿಂಗ್ ತಂತ್ರವನ್ನು ಅಭಿವೃದ್ಧಿಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read