ವರ್ಗಾವಣೆಗೆ 7 ವರ್ಷ ಸೇವೆ ಕಡ್ಡಾಯ: ಪೊಲೀಸ್ ದಂಪತಿಗಳಿಗೆ ಹೊಸ ಸಮಸ್ಯೆ

ಬೆಂಗಳೂರು: ಪೊಲೀಸರ ವರ್ಗಾವಣೆಗೆ ಪ್ರೊಬೇಷನರಿ ಅವಧಿ ಮುಗಿಸುವ ಜೊತೆಗೆ ಒಂದೇ ಸ್ಥಳದಲ್ಲಿ 7 ವರ್ಷ ಸೇವಾವಧಿ ಪೂರ್ಣಗೊಳಿಸಿರಬೇಕು ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ದೊರೆತ ಖುಷಿಯಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಗಳಿಗೆ ಮತ್ತೆ ನಿರಾಸೆಯಾಗಿದೆ. ಗೆಜೆಟ್ ನೋಟಿಫಿಕೇಶನ್ ನಲ್ಲಿ ಇಲ್ಲದ ನಿಯಮವನ್ನು ಜ್ಞಾಪನಾ ಪತ್ರದಲ್ಲಿ ಸೇರಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಈ ಮೊದಲು ಕರ್ನಾಟಕ ನಾಗರೀಕ ಸೇವಾ ತಿದ್ದುಪಡಿ ನಿಯಮ 2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವಣೆಗೆ ಅವಕಾಶ ಇದ್ದ 16 ಎ ನಿಯಮವನ್ನು ಕಾಯ್ದೆಯಿಂದ ಕೈ ಬಿಡಲಾಗಿತ್ತು. ಇದರಿಂದ ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲು ಇಲಾಖೆ ಮುಖ್ಯಸ್ಥರಿಗೆ ಅಧಿಕಾರ ಮೊಟಕುಗೊಳಿಸಲಾಗಿತ್ತು.

ಪತಿ-ಪತ್ನಿ ವರ್ಗಾವಣೆಗೆ ಅವಕಾಶ ಇರಲಿಲ್ಲ. ಪೊಲೀಸ್ ವಲಯದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ವರ್ಗಾವಣೆ ವಿಶೇಷ ನಿಯಮ 2022 ಜಾರಿಗೊಳಿಸಿ 16 ಎ ನಿಯಮವನ್ನು ಮರುಸ್ಥಾಪನೆ  ಮಾಡುವ ಮೂಲಕ ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು.

ಈಗ ಪ್ರೊಬೇಷನರಿ ಅವಧಿ ಪೂರ್ಣಗೊಳಿಸುವ ಜೊತೆಗೆ ಒಂದೇ ಸ್ಥಳದಲ್ಲಿ 7 ವರ್ಷ ಸೇವಾವಧಿ ಪೂರೈಸಿರಬೇಕು ಎಂದು ಆದೇಶ ಹೊರಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಯಾವುದೇ ಷರತ್ತು ವಿಧಿಸದೆ ಪತಿ ಪತ್ನಿ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವರ್ಗಾವಣೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read