ಅನೈತಿಕ ಸಂಬಂಧಕ್ಕೆ ಜನಿಸಿದ ಮಗುವನ್ನು ಆಟೋದಲ್ಲೇ ಇಟ್ಟು ಜೋಡಿ ಪರಾರಿ: ಓರ್ವ ಅರೆಸ್ಟ್

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಜನಿಸಿದ 15 ದಿನಗಳ ಹೆಣ್ಣು ಶಿಶುವನ್ನು ರಸ್ತೆ ಬದಿ ನಿಲ್ಲಿಸಿದ್ದ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.

ಏಪ್ರಿಲ್ 24ರಂದು ಬೆಳಗ್ಗೆ ಬೆಳಗಿನ ಜಾವ ಎಂಟಿಟಿಸಿ ಕ್ವಾಟ್ರಸ್ ಸಮೀಪ ರಸ್ತೆ ಬದಿ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿ ಮಗು ಅಳುತ್ತಿರುವುದನ್ನು ಕೇಳಿಸಿಕೊಂಡ ಸಾರ್ವಜನಿಕರು ನೋಡಿದಾಗ ಹೆಣ್ಣು ಮಗು ಕಂಡುಬಂದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಗುವನ್ನು ರಕ್ಷಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ಒಬ್ಬ ಮಹಿಳೆ ಮತ್ತು ಪುರುಷ ಮಗುವನ್ನು ಎತ್ತಿಕೊಂಡು ಬಂದು ಆಟೋದಲ್ಲಿ ಮಲಗಿಸಿರುವುದು ಪತ್ತೆಯಾಗಿತ್ತು. ಇಬ್ಬರೂ ಮಡಿಕೇರಿಗೆ ಕೆಎಸ್ಆರ್ಟಿಸಿ ಬಸ್ ಹತ್ತಿ ಪರಾರಿಯಾಗಿದ್ದು, ತನಿಖೆ ಕೈಗೊಂಡ ಪೊಲೀಸರು ವ್ಯಕ್ತಿ ಮತ್ತು ಮಹಿಳೆಯನ್ನು ವಿರಾಜಪೇಟೆಯಲ್ಲಿ ಪತ್ತೆ ಮಾಡಿದ್ದಾರೆ.

ವಿರಾಜಪೇಟೆಯ ಅಪ್ಪಣ್ಣ ಮತ್ತು 30 ವರ್ಷದ ಮಹಿಳೆಯ ನಡುವೆ ಅನೈತಿಕ ಸಂಬಂಧವಿರುವುದು ಗೊತ್ತಾಗಿದೆ. ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪ್ಪಣ್ಣ, 30 ವರ್ಷದ ವಿಧವೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಆಕೆಗೆ ಈಗಾಗಲೇ ಒಂದು ಮಗುವಿದೆ. ಅಪ್ಪಣ್ಣನ ಜೊತೆಗೆ ಅಕ್ರಮ ಸಂಬಂಧಕ್ಕೆ ಈ ಹೆಣ್ಣು ಮಗು ಜನಿಸಿದ್ದು, ಸೀಳುತುಟಿ ಇದ್ದ ಕಾರಣ ಮಗು ಬೇಡವಾಗಿತ್ತು. ಹೀಗಾಗಿ ವಿರಾಜಪೇಟೆಯಿಂದ ಬೆಂಗಳೂರಿಗೆ ಬಂದು ರಸ್ತೆ ಬದಿ ನಿಲ್ಲಿಸಿದ ಆಟೋದಲ್ಲಿ ಮಗು ಮಲಗಿಸಿ ಪರಾರಿಯಾಗಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಅಪ್ಪಣ್ಣನನ್ನು ಬಂಧಿಸಿದ ಪೊಲೀಸರು ಮಗುವನ್ನು ಆರೈಕೆ ಮಾಡಲು ಎಚ್ಚರಿಕೆ ನೀಡಿ ಮಹಿಳೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read