Video | ಹಾಸ್ಯದ ಹೆಸರಿನಲ್ಲಿ ಅಶ್ಲೀಲ ಮಾತು; ಕಿವಿ ಮುಚ್ಚಿಕೊಂಡ ಪ್ರೇಕ್ಷಕರು

ಛತ್ತೀಸ್‌ಗಢದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಭಿಲಾಯ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಉತ್ಸವದ ವೇಳೆ ಸ್ಟಾಂಡಪ್‌ ಕಮೆಡಿಯನ್‌ ಯಶ್‌ ರಾಠಿ ನೀಡಿದ ಕಾರ್ಯಕ್ರಮ ಪ್ರೇಕ್ಷಕರಿಗೆ ತೀವ್ರ ಮುಜುಗರವನ್ನುಂಟು ಮಾಡಿದ ಘಟನೆ ನಡೆದಿದೆ.

ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕುಟುಂಬ ಸದಸ್ಯರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಯಶ್ ರಾಠಿ ಅವರ ಮಾತುಗಳನ್ನು ಕೇಳಲಾರದೆ ಹಲವರು ಕಿವಿ ಮುಚ್ಚಿಕೊಂಡಿದ್ದರೆ ಮತ್ತಷ್ಟು ಮಂದಿ ಅಲ್ಲಿಂದ ಎದ್ದು ಹೊರಡಲು ಮುಂದಾಗಿದ್ದಾರೆ.

ಯಶ್ ರಾಠಿ ಅವರ ಸ್ಟ್ಯಾಂಡ್‌ಅಪ್ ಕಾಮಿಡಿಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅಲ್ಲಿ ಅವರು ಅಸಭ್ಯ ಭಾಷೆ ಬಳಸಿರುವುದು ಕಂಡು ಬಂದಿದೆ. ಒಂದು ಹಂತದಲ್ಲಿ ಸಂಘಟನಾ ಸಮಿತಿಯ ಸದಸ್ಯರೊಬ್ಬರು ಮಧ್ಯಪ್ರವೇಶಿಸಿ, ವೇದಿಕೆಯ ಮೇಲೆ ರಾಠಿ ಅವರಿಗೆ ಷೋ ಕೊನೆಗೊಳಿಸುವಂತೆ ಸೂಚಿಸಿದ್ದಾರೆ.

ಈಗ ಭಾರತೀಯ ಜನತಾ ಯುವ ಮೋರ್ಚಾ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಕರ್ಣಿ ಸೇನೆಯು ಐಐಟಿ-ಭಿಲಾಯ್‌ನ ಆಡಳಿತ ಪೊಲೀಸರಿಗೆ ಔಪಚಾರಿಕ ದೂರುಗಳನ್ನು ಸಲ್ಲಿಸಿದೆ.

ಏತನ್ಮಧ್ಯೆ, ಐಐಟಿ-ಭಿಲಾಯ್‌ನ ಮ್ಯಾನೇಜ್‌ಮೆಂಟ್ ಈ ಘಟನೆ ಕುರಿತು ಪ್ರತಿಕ್ರಿಯಿಸಿ “ಅಶ್ಲೀಲ ಭಾಷೆ ಗಮನಕ್ಕೆ ಬಂದ ತಕ್ಷಣ ಪ್ರದರ್ಶನವನ್ನು ನಿಲ್ಲಿಸಲಾಯಿತು” ಎಂದು ತಿಳಿಸಿದೆ. ನಿರ್ದೇಶಕ ರಾಜೀವ್ ಪ್ರಕಾಶ್ ಅವರು ಸಂಸ್ಥೆಯ ಪ್ರತಿಷ್ಠೆಗೆ ಆದ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.

ಯಶ್ ರಾಠಿ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಕಾರ್ಯಕ್ರಮವೊಂದರಲ್ಲಿ ಭಗವಾನ್ ರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಡೆಹ್ರಾಡೂನ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read