ತೆಂಗು ಬೆಳೆ ರೋಗಬಾದೆ : ಶಾಸಕ ಸಿ.ಎನ್ ಬಾಲಕೃಷ್ಣರಿಂದ ಗಮನ ಸೆಳೆಯುವ ಪ್ರಶ್ನೆ.!

ಹಾಸನ : ತೆಂಗು ಬೆಳೆ ರೋಗಬಾದೆಯ ಕುರಿತು ಇತ್ತೀಚಿನ ದಿನಗಳಲ್ಲಿ ತೆಂಗು ಬೆಳೆ ರೋಗಬಾದೆಯಿಂದ ಭಾರಿ ಪ್ರಮಾಣದಲ್ಲಿ ತೆಂಗು ಇಳುವರಿ ಕುಂಠಿತವಾಗುತ್ತಿದ್ದು ತೆಂಗು ಬೆಳೆದಿರುವ ರೈತರುಗಳು ಸಂಕಷ್ಟಕ್ಕೀಡಾಗುತ್ತಿರುವ ಬಗ್ಗೆ ತೋಟಗಾರಿಕೆ ಸಚಿವರಿಗೆ ಶಾಸಕರಾದ ಸಿ.ಎನ್. ಬಾಲಕೃಷ್ಣ, ರವರು ನಿಯಮ 73 ರ ಅಡಿಯಲ್ಲಿ ಗಮನ ಸೆಳೆದಿದ್ದಾರೆ.

ತೋಟಗಾರಿಕೆ ಸಚಿವರ ಉತ್ತರ: ರಾಜ್ಯದಲ್ಲಿ ತೆಂಗು ಬೆಳೆಯನ್ನು 5.65 ಲಕ್ಷ ಹೆಕ್ಟೇರ್ ಪ್ರದೇಶದಲಿ ಬೆಳೆಯಲಾಗುತ್ತಿದ್ದು, 24.76 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಉತ್ಪಾದನೆ ಇರುತ್ತದೆ. ತೆಂಗು ಬೆಳೆಯನ್ನು ಪ್ರಮುಖವಾಗಿ ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ (ರಾಮನಗರ), ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲಿ ರಾಜ್ಯದಲ್ಲಿ ತೆಂಗು ಬೆಳೆಗೆ ಸೊರಗು ರೋಗ- 36,876 ಹೆಕ್ಟೇರ್, ಬೆಂಕಿ ರೋಗ-27,850 ಹೆಕ್ಟೇರ್, ಹರಳು ಉದುರುವ ರೋಗ-22,394 ಹೆಕ್ಟೇರ್, ಕಪ್ಪು ತಲೆ ಹುಳುವಿನ ಬಾದೆಯಿಂದ 62,044 ಹೆಕ್ಟೇರ್ ಮತ್ತು ಬಿಳಿನೊಣದ ಬಾದೆಯಿಂದ 3,24,259 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವುದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಣೆ ಕಂಡಿಕೆ 55 ರನ್ವಯ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾದೆಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಲು ಬೆಳೆ ಸಮೀಕ್ಷೆ ಮಾದರಿಯಂತೆ ಪ್ರತ್ಯೇಕ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದ್ದು, ಸಮೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಉತ್ತರ ನೀಡಿದ್ದಾರೆ.

ಇಲಾಖೆಯಿಂದ ತೆಗೆದುಕೊಂಡ ಕ್ರಮಗಳು

ತೆಂಗಿನ ತೋಟಗಳ ಪುನಃಶ್ವೇತನ, ಮರುನಾಟಿ ಮತ್ತು ನಿರ್ವಹಣೆ ಕಾರ್ಯಕ್ರಮ: ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ತೆಂಗಿನ ತೋಟಗಳ ಪುನಃಶ್ವೇತನ, ಮರುನಾಟಿ ಮತ್ತು ನಿರ್ವಹಣೆಗಾಗಿ ಪ್ರತಿ ಫಲಾನುಭವಿಗೆ ಒಂದು ಹೆಕ್ಟೇರ್‌ವರೆಗೆ ರೂ.54,000 ಗಳನ್ನು ನೀಡಲಾಗುತ್ತಿದೆ. ಮೊದಲನೇ ವರ್ಷ ರೂ.45,250 ಗಳನ್ನು ಹಾಗೂ ಎರಡನೇ ವರ್ಷದ ನಿರ್ವಹಣೆಗೆ ರೂ.8,750 ಗಳ ಸಹಾಯಧನವನ್ನು ನೀಡಲಾಗುತ್ತಿದೆ.

2023-24 ನೇ ಸಾಲಿನಲಿ ಈ ಕಾರ್ಯಕ್ರಮದಡಿ 2423.50 ಹೆಕ್ಟೇರ್ ಗಳಿಗೆ ರೂ. 951.19 ಲಕ್ಷಗಳ ಸಹಾಯಧನ ಒದಗಿಸಲಾಗಿದ್ದು 2024-25ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಅನುದಾನ ಬಿಡುಗಡೆಯಾಗಿದ್ದರಿಂದ ಸದರಿ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಮೂದಲನೇ ವರ್ಷದ ಈ ಕಾರ್ಯಕ್ರಮದ ರೂ.186.04 ಲಕ್ಷಗಳನ್ನು ವಿನಿಯೋಗಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. 2025-26ನೇ ಸಾಲಿನಲ್ಲಿ ಈ ಕಾರ್ಯಕ್ರಮದಡಿಯಲ್ಲಿ 1000 ಹೆಕ್ಟೇರ್ ವಿಸ್ತೀರ್ಣದಲ್ಲಿ ಅನುಷ್ಠಾನಗೊಳಿಸಲು ರೂ.452.50 ಲಕ್ಷಗಳ ಅನುದಾನ ನಿಗದಿಯಾಗಿದ್ದು, ಅನುಷ್ಟಾನ ಪ್ರಗತಿಯಲ್ಲಿದೆ.

ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆ ಹಾಗೂ ನಿರ್ವಹಣೆ ಕಾರ್ಯಕ್ರಮ : ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆ ಹಾಗೂ ನಿರ್ವಹಣೆಗಾಗಿ ಒಂದು ಹೆಕ್ಟೇರ್ ಗೆ ರೂ. 35,000 ಗಳನ್ನು 2 ವರ್ಷಗಳ ಅವಧಿಗೆ, ಮೊದಲನೇ ವರ್ಷ ರೂ. 17500 ಗಳು ಮತ್ತು ಎರಡನೇ ವರ್ಷದಲ್ಲಿ ರೂ.17500 ಗಳಂತೆ ಸಹಾಯಧನ ನೀಡಲಾಗುತ್ತಿದೆ. ರೋಗ ಮತ್ತು ಕೀಟಬಾಧಿತ ತಾಕುಗಳನ್ನು ಗುಚ್ಛಗಳಲ್ಲಿ (Clusters) ಆಯ್ಕೆ ಮಾಡಿ ಸಹಾಯಧನ ನೀಡಲಾಗಿರುತ್ತದೆ.

2023-24 ನೇ ಸಾಲಿನಲ್ಲಿ ಈ ಕಾರ್ಯಕ್ರಮದಡಿ ರೂ. 5000 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, 28420 ಹೆಕ್ಟೇರ್‌ಗಳಲ್ಲಿ 41185 ಫಲಾನುಭವಿಗಳಿಗೆ ಸಹಾಯಧನ ಒದಗಿಸಲಾಗಿದೆ. 2024-25ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರೂ.4973.45 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಮೂದಲನೇ ವರ್ಷದ ನಿರ್ವಹಣೆಗಾಗಿ ವಿನಿಯೋಗಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.

ಕಪ್ಪು ತಲೆ ಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 23 ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಶಿಲೀಂದ್ರ ನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ. 2024-25 ನೇ ಸಾಲಿನಲ್ಲಿ ರೂ.140 ಲಕ್ಷಗಳ ಅನುದಾನಕ್ಕೆ 328.44 ಲಕ್ಷ ಸಂಖ್ಯೆಯ ಪರೋಪ ಜೀವಿಗಳನ್ನು ಉತ್ಪಾದಿಸಿ 6969 ಫಲಾನುಭವಿಗಳಿಗೆ. ವಿತರಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ.140 ಲಕ್ಷಗಳ ಅನುದಾನ ನಿಗದಿಯಾಗಿದ್ದು, ಪರೋಪ ಜೀವಿಗಳನ್ನು ಹಾಗೂ ಐಸಿರಿಯಾ ಜೈವಿಕ ಶಿಲೀಂದ್ರ ನಾಶಕವನ್ನು ಉತ್ಪಾದಿಸಿ ಉಚಿತವಾಗಿ ವಿತರಿಸಲಾಗುತ್ತಿದೆ.

ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ತೆಂಗು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗಾಗಿ ಪ್ರತಿ ಹೆಕ್ಟೇರಿಗೆ ತಗಲುವ ಘಟಕ ವೆಚ್ಚದ ಶೇ.75 ರಂತೆ ಸಾಮಾನ್ಯ ವರ್ಗದ ರೈತರಿಗೆ ರೂ.7500 ಗಳನ್ನು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರಂತೆ ರೂ.9000 ಗಳ ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 340 ಲಕ್ಷಗಳ ಅನುದಾನ ನಿಗದಿಪಡಿಸಿದ್ದು, ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೆಂಗು ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಮಗ್ರ ರೋಗ/ಕೀಟಗಳ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ರೂ.5000 ಪ್ರತಿ ಹೆಕ್ಟೇರ್ ಘಟಕ ವೆಚ್ಚದ ಶೇ.30 ರಂತೆ ಪ್ರತಿ ಹೆಕ್ಟೇರಿಗೆ ರೂ.1500 ರಂತೆ 2 ಹೆಕ್ಟೇರ್ ರವರೆಗೆ ರೂ.3000 ಗಳ ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 525 ಲಕ್ಷಗಳ ಅನುದಾನ ನಿಗದಿಪಡಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕಾಗಿ ಇಲಾಖಾ ಪ್ರಯೋಗ ಶಾಲೆಗಳಲ್ಲಿ ಗೋನಿ ಯೋಜಸ್ ಪರೋಪ ಜೀವಿಗಳ ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲು ರೂ.50 ಲಕ್ಷಗಳ ಹೆಚ್ಚುವರಿ ಅನುದಾನ ನೀಡುವಂತೆ ತೆಂಗು ಅಭಿವೃದ್ಧಿ ಮಂಡಳಿ, ಕೊಚ್ಚಿ, ಕೇರಳ ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ತೆಂಗಿನ ಬೆಳೆಯಲ್ಲಿ ಕಂಡುಬರುವ ರೋಗ/ಕೀಟಗಳ ಹತೋಟಿ ಕ್ರಮಗಳ ಕುರಿತು ಅರಿವು ಮೂಡಿಸಲು ವಿಷಯ ತಜ್ಞರು, ತೋಟಗಾರಿಕಾ ವಿಜ್ಞಾನಗಳ ವಿದ್ಯಾಲಯ, ತಜ್ಞರು, ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI), ಕಾಸರಗೋಡು ಹಾಗೂ ತೆಂಗು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಸಹಯೋಗದೊಂದಿಗೆ 12,500 ರೈತರಿಗೆ 85 ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಉತ್ತರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read