ಹಾಸನ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜು.26 ರಂದು ಅರಸೀಕೆರೆಗೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳಾಗದಂತೆ ನಿಗಾವಹಿಸಿ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ತಮ್ಮ ಕೆಲಸವನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸೂಚಿಸಿದ್ದಾರೆ.
ಅರಸೀಕೆರೆ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರಲ್ಲದೆ, ಕಾರ್ಯಕ್ರಮ ಮುಗಿಯುವರೆಗೂ ಯಾರು ಆ ಕಡೆ ಈ ಕಡೆ ಓಡಾಡದಂತೆ ಶಿಸ್ತು ಬದ್ಧವಾಗಿ ಕುಳಿತು ಕೊಳ್ಳಲು ನಿಗಾವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸುಸಜ್ಜಿತವಾದ ಎರಡು ಅಂಬುಲೆನ್ಸ್ ಗಳೊಂದಿಗೆ ಪ್ರಥಮ ಚಿಕಿತ್ಸೆಗೆ ಅಗತ್ಯ ಔಷಧಿಗಳು ತುರ್ತು ಸಂದರ್ಭದಲ್ಲಿ ಲಭ್ಯವಿರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್ಚರವಹಿಸಿ ಸೂಕ್ತ ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಕಾರ್ಯಕ್ರಮದಲ್ಲಿ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರುವ ಕಾಮಗಾರಿಗಳ ಕಲ್ಲುಗಳನ್ನು ಶಿಷ್ಟಾಚಾರದಂತೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಸವಾಗದಂತೆ ಎಚ್ಚರವಹಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಶುಚಿತ್ವ ಕಾಪಾಡಲು ನಗರಸಭೆಯ ಅಧಿಕಾರಿಗಳು ಕ್ರಮವಹಿಸುವಮತೆ ನಿರ್ದೇಶನ ನೀಡಿದರು.
ಇದು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಕಡ್ಡಾಯವಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಲಾಖಾ ಮಾಹಿತಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಅರಸೀಕೆರೆ 68 ಕೋಟಿ ರೂ., ವಸತಿ ರಹಿತರಿಗೆ ವಸತಿ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಸ್ವಾಧೀನ ಪತ್ರ ಹಸ್ತಾಂತರ 53 ಕೋಟಿ ರೂ., ಅರಸೀಕೆರೆ ಬಂಡಿಹಳ್ಳಿ ಬೈಪಾಸ್‌ನಿಂದ ಜಾಜೂರು ಬೈಪಾಸ್‌ರವರೆಗೆ ರಸ್ತೆ ನಿರ್ಮಾಣ 8.7 ಕೋಟಿ ರೂ., ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಅರಸೀಕೆರೆ 8 ಕೋಟಿ ರೂ., ವಾರ್ಡ್ ನಂ.1 ಕಂತೇನಹಳ್ಳಿ ಅರಸೀ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಈಜುಕೊಳ 5 ಕೋಟಿ ರೂ., ವಾರ್ಡ್ ನಂ.22 ರ ಸಂತೆ ಮೈದಾನದಲ್ಲಿ ಐಡಿಎಸ್‌ಎಂಟಿ ಯೋಜನೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಮಳಿಗೆಗಳು 3 ಕೋಟಿ ರೂ., 6 ಅಂಗನವಾಡಿ ಕಟ್ಟಡಗಳು 1.2 ಕೋಟಿ ರೂ.ಮತ್ತಿತರ ಪೂರ್ಣಗೊಂಡಿರುವ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು, ಉಪ ಮುಖ್ಯ ಮಂತ್ರಿ ಹಾಗೂ ವಿವಿಧ ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ತಿಳಿಸಿದರು.