ಬೆಂಗಳೂರು: ಧೂಮಪಾನ ಆರೋಗ್ಯಕ್ಕೆ ಹಾನಿಕರ ಮಾತ್ರವಲ್ಲ ಜೀವಕ್ಕೆ ಕುತ್ತುತಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರದಲ್ಲಿ ನಡೆದಿದೆ. ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನವಾಗಿರುವ ಘಟನೆ ನಡೆದಿದೆ.
ದೊಡ್ಡಬಳ್ಳಾಪುರದ ಕನ್ನಮಂಗಲ ಕಾಲೋನಿಯಲ್ಲಿ ಈ ದುರಣ್ತ ಸಂಭವಿಸಿದೆ. ಉದಯ್ ಕುಮಾರ್ (40) ಮೃತ ವ್ಯಕ್ತಿ. ಉದಯ್ ಕುಮಾರ್ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಕೂಲಿ ಕೆಲಸ ಮಾಡುತ್ತಿದ್ದವನು ಕುಡಿತ, ಸಿಗರೇಟ್ ಚಟಕ್ಕೆ ದಾಸನಾಗಿದ್ದ. ಕೆಲಸ ಮುಗಿಸಿ ಮನೆಗೆ ಬಂದವನು ಮನೆಯಲ್ಲಿಯೇ ಸಿಗರೇಟ್ ಸೇದಿ ಉಳಿದ ತುಂಡನ್ನು ಅಲ್ಲೇ ಬಿಸಾಕಿದ್ದಾನೆ. ಸಿಗರೇಟ್ ತುಂಡಿನಲ್ಲಿದ್ದ ಬೆಂಕಿ ನಿಧಾನವಾಗಿ ವ್ಯಾಪಿಸಿಕೊಂಡಿದ್ದು, ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ.
ಮನೆಯೊಳಗಿದ್ದ ಉದಯ್ ಕುಮಾರ್ ಮನೆಯಿಂದ ಹೊರಬರಲಾಗದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಕ್ಕಪಕ್ಕದ ಮನೆಯವರು ಬೆಂಕಿ ಆರಿಸಿ ಉದಯ್ ಕುಮಾರ್ ನನ್ನು ರಕ್ಷಿಸುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ಮನೆಗೆ ಬಂದವನು ಸಿಗರೇಟ್ ಸೇದಿ ಅಲ್ಲಿಯೇ ಬಿಸಾಕಿದ್ದಾನೆ. ಸಿಗರೇಟ್ ತುಂಡು ಬಟ್ಟೆಗೆ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಮನೆಗೆ ಆವರಿಸಿದೆ. ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಮನೆಯಿಂದ ಹೊರಬರಲಾಗದೇ ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.