ಬೆಳಗಾವಿ: ಮನೆಯಿಂದ ಗಣಪತಿ ನೋಡಲೆಂದು ಹೋಗಿದ್ದ ಇಬ್ಬರು ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದ 24 ಗಂಟೆಯಲ್ಲಿ ಮಕಕ್ಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅನಮೋಲ ಶಂಕರ ಪರಿಯಾರ (10) ಹಾಗೂ ಕಾರ್ತಿಕ ಅರ್ಜುನ ಪರಿಯಾರ (8) ನಾಪತ್ತೆಯಾಗಿದ್ದ ಮಕ್ಕಳು. ಅನಗೋಳದ ಶಿವಶಕ್ತಿ ನಗರದ ಮನೆಯಿಂದ ನಿನ್ನೆ ಮಧ್ಯಾಹ್ನ 12 ಗಂಟೆಗೆ ಮಕ್ಕಳಿಬ್ಬರೂ ಶಿವಶಕ್ತಿ ನಗರದ ಗಣಪತಿ ನೋಡಲು ಹೋಗುತ್ತೇವೆ ಎಂದು ಮನೆಯಿಂದ ಹೊರಟವರು ಸಂಜೆಯಾದರೂ ಮನೆಗೆ ವಾಪಸ್ ಆಗಿಲ್ಲ. ಇದರಿಂದ ಕಂಗಾಲಾದ ಪೋಷಕರು ಉದ್ಯಮಬಾಗ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಮಕ್ಕಳನ್ನು ಪತ್ತೆ ಮಾಡಿ ಸುರಕ್ಷಿತವಾಗಿ ಕರೆ ತಂದಿದ್ದಾರೆ. ಸದ್ಯ ಮಕ್ಕಳಿಬ್ಬರೂ ಪೋಷಕರ ಮಡಿಲು ಸೇರಿದ್ದು, ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.