ಹೈದರಾಬಾದ್: ಕಳೆದ 5 ವರ್ಷಗಳಿಂದ ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಮಕ್ಕಳ ಕಿಡ್ನ್ಯಾಪ್ ಪ್ರಕರಣ ಸಂಬಂಧ ಬೃಹತ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಕ್ಕಳ ಕಿಡ್ನ್ಯಾಪ್ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಿದ್ದು, ಆರು ಮಕ್ಕಳನ್ನು ರಕ್ಷಿಸಿದ್ದಾರೆ.
ಅಪಹರಣಕಾರರ ಗುಂಪು ಐದು ವರ್ಷದ ಮಕ್ಕಳನ್ನು ಗುರಿಯಾಗಿಸಿಕೊಂಡು ಹೈದರಾಬಾದ್, ಸೈಬರಾಬಾದ್ ಮತ್ತು ಸಂಗರೆಡ್ಡಿ ಜಿಲ್ಲೆಗಳಲ್ಲಿ ಮಕ್ಕಳ ಕಿಡ್ನ್ಯಾಪ್ ಮಾಡುತ್ತಿತ್ತು. ಕಾರ್ಮಿಕ ವರ್ಗದ ಪೋಷಕರ ಮಕ್ಕಳನ್ನು ಪಹರಣ ಮಾಡುವುದನ್ನೇ ಕಾಯಕ ಮಾಡಿಕೊಂಡಿತ್ತು. ಹೀಗೆ ಅಪಹರಿಸಿದ ಮಕ್ಕಳನ್ನು ಮಕ್ಕಳಿಲ್ಲದವರಿಗೆ 1 ಲಕ್ಷದಿಂದ 7 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿತ್ತು.
4 ವರ್ಷದ ಬಾಲಕನ ಅಪಹರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರಿನ ತನಿಖೆ ವೇಳೆ ಪ್ರಮುಖ ಆರೋಪಿ ಚಿಲುಕುರಿ ರಾಜು ಎಂಬಾತನ ಬಗ್ಗೆ ಸುಳಿವು ಸಿಕ್ಕಿತ್ತು. ಈತ ಆಯುರ್ವೇದ ವೈದ್ಯನಾಗಿದ್ದು, ಈತನೇ ಪ್ರಕರಣದ ಮಾಸ್ಟರ್ ಮೈಂಡ್. ತನ್ನ ಸಹಚರರ ಜೊತೆ ಸೇರಿ ಮಕ್ಕಳನ್ನು ಕಿಡ್ನ್ಯಾಪ್ ಮಾಡುತ್ತಿದ್ದ. ಚಿಲುಕುರಿ ರಾಜು ಬಂಧನದ ಬಳಿಕ ಧಂಧೆಯಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ತರಕಾರಿ ಮಾರಾಟಗಾರ ಮೊಹಮ್ಮದ್ ಆಸೀಫ್, ವೈದ್ಯ ರಿಜ್ವಾನಾ, ಮೇಸ್ತ್ರಿ ನರಸಿಂಹ ರೆಡ್ಡಿ, ಬಾಲರಾಜ್ ಎಂದು ಗುರುತಿಸಲಾಗಿದೆ. ಆರು ಮಕ್ಕಳನ್ನು ರಕ್ಷಿಸಲಾಗಿದೆ.