ಬೆಂಗಳೂರು : ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 09:06:2023 ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನ ನೌಕರರ ಮಾಹಿತಿಗಾಗಿ ನೀಡುತ್ತಿದ್ದೇವೆ.
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ ವಿವಾಹ-ವಿಚ್ಛೇದಿತ/ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ರಜೆಯ ಅವಶ್ಯಕತೆ ಇರುತ್ತದೆಂದು ತಿಳಿಸಿ ಈ ರಜೆಯ ಸೌಲಭ್ಯವನ್ನು ಅಂತಹ ಪುರುಷ ಸರ್ಕಾರಿ ನೌಕರರಿಗೂ ಸಹ ವಿಸ್ತರಿಸಬೇಕೆಂದು ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿರುತ್ತವೆ. ಮೂಲತಃ ಶಿಶುಪಾಲನಾ ರಜೆಯ ಸೌಲಭ್ಯವನ್ನು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ವಿಸ್ತರಿಸಿದ್ದಾಗ್ಯೂ ಏಕಪೋಷಕರಾಗಿರುವ ಪುರುಷ ಸರ್ಕಾರಿ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ನ್ಯಾಯಸಮ್ಮತವಾಗುವುದನ್ನು ಪರಿಗಣಿಸಿ ಸರ್ಕಾರ ಶಿಶುಪಾಲನಾ ರಜೆಯ ಸೌಲಭ್ಯವನ್ನು ಕೆಲವು ಷರತ್ತುಗಳಿಗೊಳಪಟ್ಟು ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ವಿವಾಹ-ವಿಚ್ಛೇದಿತ/ವಿಧುರ ಸರ್ಕಾರಿ ಪುರುಷ ನೌಕರರಿಗೂ ಸಹ ವಿಸ್ತರಿಸಲು ತೀರ್ಮಾನಿಸಿದೆ. ಅದರಂತೆ, ಈ ಆದೇಶ. ದಿನಾಂಕ:9.6.2023 ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರವು ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ವಿವಾಹ-ವಿಚ್ಛೇದಿತ/ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆಯ ಸೌಲಭವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದೆ.
ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವುದಿನಾಂಕ:21.06.2021 ರ ಸರ್ಕಾರಿ ಆದೇಶ ಸಂಖ್ಯೆ ಆಇ 4(ಇ) ಸೇನಿಸೇ 2021 ರಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆಯನ್ನು ಮಂಜೂರು ಮಾಡತಕ್ಕದ್ದು.
ಯಾವುದೇ ಸಂದರ್ಭದಲ್ಲಿ ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯು ತಾನಾಗಿಯೇ ರದ್ದುಗೊಳ್ಳುತ್ತದೆ.
ಈ ಆದೇಶದ ಉಪಬಂಧಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯಲ್ಲಿ ಅಳವಡಿಸಲು ಪ್ರತ್ಯೇಕ ತಿದ್ದುಪಡಿಯನ್ನು ತರಲಾಗುವುದು ಎಂದು ಆದೇಶಿಸಿದೆ.


