ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಕಾಣಿಸಿಕೊಂಡಿದ್ದು, ನೂರಾರು ಹಂದಿಗಳು ಮೃತಪಟ್ಟಿವೆ. ಈ ನಡುವೆ ರೋಗಗ್ರಸ್ತ ಹಂದಿಗಳನ್ನು ಮಾಲೀಕ ಕೆರೆಗೆ ಬಿಸಾಕಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಚಿಂತಾಮಣಿ ಬಳಿಯ ಹೆಬ್ಬರಿ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಮಾಲೀಕ ಬಿಸಾಕಿದ್ದು, ಕೆರೆಯಲ್ಲಿ ಹಂದಿಗಳು ತೇಲುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಜ್ವರದಿಂದಾಗಿ ನೂರಾರು ಹಂದಿಗಳು ಮೃತಪಟ್ಟಿದ್ದು, ಸಾವನ್ನಪ್ಪಿದ ಹಂದಿಗಳನ್ನು ಕೆರೆಗೆ ಬಿಸಾಕಲಾಗಿದೆ. ಈ ಕೆರೆಯ ನೀರನ್ನು ಜನರು, ಜಾನುವಾರುಗಳು ಬಳಸಿದರೆ ಅಪಾಯ ಎದುರಾಗುವ ಆತಂಕ ಎದುರಾಗಿದೆ.
ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಬರಿ ಗ್ರಾಮದ ಕೆರೆ ಬಳಿ ಕಂದಾಯ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಹೆಬ್ಬರಿ ಗ್ರಾಮದ ಫಾರ್ಮ್ ನಲ್ಲಿ ನೂರಾರು ಹಂದಿಗಳು ಸಾವನ್ನಪ್ಪಿದ್ದು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಂದಿಗಳ ರಕ್ತದ ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಿ ಪರಿಶೀಲಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್ ನಲ್ಲಿರುವ ಹಂದಿಗಳನ್ನು ಸಾಯಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮೃತಪಟ್ಟಿರುವ ಹಿಂದಿಗಳನ್ನು ಮಾಲೀಕ ಕೆರೆಗೆ ಬಿಸಾಕಿದ್ದಾರೆ ಎಂದು ತಿಳಿದುಬಂದಿದೆ.