ಶಿವಮೊಗ್ಗ: ಕೋಳಿ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ-ಹೊಸೂರು ಮಾರ್ಗದಲ್ಲಿ ನಡೆದಿದೆ.
ಧಾರಾಕಾರ ಮಳೆಯ ನಡುವೆಯೇ ಕೋಳಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಕೋಳಿಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿವೆ. ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜನರು, ರಸ್ತೆಯಲ್ಲಿ ಬಿದ್ದಿದ್ದ ಕೋಳಿಗಳನ್ನು ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ.
ಸ್ಥಳೀಯರು, ರಸ್ತೆಯಲ್ಲಿ ಓಡಾಡುತ್ತಿದ್ದವರು ಸ್ಪರ್ಧೆಗಿಳಿದವರಂತೆ ಕೋಳಿಗಳನ್ನು ಹೊತ್ತೊಯುತ್ತಿದ್ದ ದೃಶ್ಯ ಕಂಡುಬಂದಿದೆ. ತುಮಕೂರಿನ ತಾಜ್ ಟ್ರೇಡರ್ಸ್ ಗೆ ಸೇರಿದ ಲಾರಿಯಲ್ಲಿ ನಾಲ್ಕೂವರೆ ಟನ್ ತೂಕದಷ್ಟು ಕೋಳಿಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಆನಂದಪುರ ಬಳಿ ಲಾರಿ ಅಪಘಾತಕ್ಕಿಡಾಗಿದೆ. ಘಟನೆಯಲ್ಲಿ ಹಲವು ಕೋಳಿಗಳು ಸಾವನ್ನಪ್ಪಿವೆ. ರಸ್ತೆಯಲ್ಲಿ ಹೋಗುತ್ತಿದ್ದವರು ತಮ್ಮ ವಾಹನಗಳನ್ನು ನಿಲ್ಲಿಸಿ ಕೋಳಿಗಳನ್ನು ಹೊತ್ತೊಯ್ದಿದ್ದಾರೆ.
ಅಪಘಾತದಲ್ಲಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. 8 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದು ಚಾಲಕ ನೋವು ತೋಡಿಕೊಂಡಿದ್ದಾರೆ.