ಚೆನ್ನೈ: ಹಿಂದಿ ಪದ್ಯ ಕಂಠಪಾಠ ಮಾಡದ ಮೂರನೇ ತರಗತಿ ವಿದ್ಯಾರ್ಥಿಗೆ ಹೊಡೆದ ಆರೋಪದ ಮೇಲೆ ಚೆನ್ನೈನ ಶಾಲೆಯೊಂದರ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿ ಶಿಕ್ಷಕಿಯ ವಿಚಾರಣೆ ನಡೆಸಿ ಶಾಲಾ ಮಾರ್ಗಸೂಚಿಗೆ ವಿರುದ್ಧವಾಗಿ ದೈಹಿಕ ಶಿಕ್ಷೆ ಮತ್ತು ನಿಂದಿಸಿರುವುದರಿಂದ ಕೆಲಸದಿಂದ ಅಮಾನತು ಮಾಡಿದೆ.
ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಅಭಿಯಾನ ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಾಜಾಜಿ ವಿದ್ಯಾಶ್ರಮ ಶಾಲೆಯ ಶಿಕ್ಷಕಿ ಕಳೆದ ವಾರ ಮಕ್ಕಳಿಗೆ ಹಿಂದಿ ಕಂಠಪಾಠ ಮಾಡಿಕೊಂಡು ಬರಲು ಹೇಳಿದ್ದರು. ಮೂರನೇ ತರಗತಿಯ ವಿದ್ಯಾರ್ಥಿ ಹಿಂದಿ ಪದ್ಯ ಹೇಳಲು ವಿಫಲನಾಗಿದ್ದಕ್ಕೆ ಥಳಿಸಿದ್ದರು.
ಶಿಕ್ಷಕಿ ಥಳಿಸಿದ ವಿಚಾರವನ್ನು ಪೋಷಕರು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿ, ಶಿಕ್ಷಕಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಶಿಕ್ಷಕಿ ವಿಚಾರಣೆ ನಡೆಸಿದ ಆಡಳಿತ ಮಂಡಳಿ ಹಲ್ಲೆ ಮಾಡಿದ ಶಿಕ್ಷಕಿಯನ್ನು ಅಮಾನತು ಮಾಡಿದೆ. ಶಾಲೆ ಮಾರ್ಗಸೂಚಿಯ ಪ್ರಕಾರ ದೈಹಿಕ ಶಿಕ್ಷೆ, ನಿಂದನೆ, ಭಾವನಾತ್ಮಕ ನಿಂದನೆಗೆ ನಿರ್ಬಂಧವಿದೆ. ಹೀಗಾಗಿ ಶಿಕ್ಷಕಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಹೇಳಲಾಗಿದೆ.