ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಇದರ ನಡುವೆಯೇ ಮಧ್ಯಪ್ರದೇಶದ ಜಬಲ್ಪುರ, ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆಗೆ ಎಲ್ಲಾ ಸಿಬ್ಬಂದಿಗೆ ರಜೆಯನ್ನು ರದ್ದು ಮಾಡಲಾಗಿದೆ.
ಕಾರ್ಖಾನೆಯ ಉಪ ಪ್ರಧಾನ ವ್ಯವಸ್ಥಾಪಕರು ಈ ಕುರಿತಾಗಿ ಉದ್ಯೋಗಿಗಳಿಗೆ ಸೂಚನೆ ನೀಡಿದ್ದು, ಕಾರ್ಖಾನೆಯ ಮುಖ್ಯಸ್ಥರ ಸೂಚನೆ ಮತ್ತು ಭಾರತ ಯುದ್ಧ ಸಾಮಗ್ರಿ ನಿಯಮಿತ ನಿರ್ದೇಶನದ ಮೇರೆಗೆ ಎಲ್ಲ ಸಿಬ್ಬಂದಿ ರಜೆಯನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ತುರ್ತು ಅಗತ್ಯತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಸಿಬ್ಬಂದಿ ರಜೆ ರದ್ದು ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಬರಬೇಕು ಎಂದು ತಿಳಿಸಲಾಗಿದೆ.
ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯಾಚರಣೆಯ ತುರ್ತುಸ್ಥಿತಿಯ ಹಿತದೃಷ್ಟಿಯಿಂದ ಆದೇಶ ಹೊರಡಿಸಲಾಗಿದೆ. ಯಾವುದೇ ವಿನಾಯಿತಿಯನ್ನು ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ. ಉತ್ಪಾದನಾ ಗುರಿಯನ್ನು ಪೂರೈಸಲು ಎರಡು ದಿನಗಳಿಗಿಂತ ಹೆಚ್ಚಿನ ಅಧಿಕಾರಿಗಳು ಮತ್ತು ಉದ್ಯೋಗಿಗಳ ರಜೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಖಮರಿಯಾದ ಆರ್ಡನೆನ್ಸ್ ಕಾರ್ಖಾನೆಯ
ಪ್ರೊ ಅವಿನಾಶ್ ಶಂಕರ್ ತಿಳಿಸಿದ್ದಾರೆ.
ಈ ಹಿಂದೆ ಭದ್ರತಾ ಪಡೆಯ ಸಿಬ್ಬಂದಿಗೆ ರಜೆ ರದ್ದು ಮಾಡಲಾಗಿತ್ತು. ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಂತರ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ಭಾರತ ಈಗಾಗಲೇ ಅನೇಕ ಕ್ರಮ ಕೈಗೊಂಡಿದ್ದು, ಸಮರಾಭ್ಯಾಸವನ್ನೂ ನಡೆಸಲಾಗಿದೆ.