ಮಂಗಳೂರು: ಹಿಂದೂ ಯುವಕರು ಅನ್ಯ ಕೋಮಿನವರನ್ನು ಪ್ರೀತಿಸಿ ವಿವಾಹವಾಗಿ ಎಂದು ಕರೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ, ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಮತಾಂತರ ಮಾಡಿ ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ.
ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಹಿಂದೂಗಳು ಧೈರ್ಯವಾಗಿ ಮತಾಂತರ ಮಾಡಿ ಎಂದಿದ್ದಾರೆ. ಇತ್ತೀಚೆಗೆ ಭಜರಂಗದಳದವರು ಸಂಕಲ್ಪ ತಗೊಂಡಿದ್ದಾರೆ. ಹಿಂದೂಗಳ ಸಂಖ್ಯೆ ಹೆಚ್ಚಿಸಲು ಏನು ಐಡಿಯಾ ಇದೆ ಅಂತ ಕೇಳಿದಾಗ ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ. ಆದರೆ ನಮ್ಮ ಜನರು 2-3 ಮಕ್ಕಳನ್ನು ಮಾಡ್ತಾರಾ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಕ್ಚರ್ ಹಾಕಲು ಕಳುಹಿಸಲು ಇಷ್ಟವಿಲ್ಲ. ಅವರಿಗೆ ನಮ್ಮ ಮಕ್ಕಳು ಚನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಅನ್ನೋದಷ್ಟೇ ಆಸೆ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣಕ್ಕೆ ಒಂದು ಸಾಕು, ಎರಡು ಸಾಕು ಅಂತಾರೆ ಎಂದಿದ್ದಾರೆ.
ಸರ್ಕಾರ ನಮಗಾಗಿ ಮಾಡಿರುವ ಕಾನೂನು ಬಳಸಿಕೊಳ್ಳಬೇಕು. ಪೊಲೀಸರಿಗೂ ಹೇಳುತ್ತಿದ್ದೇನೆ. ಇದು ಸರ್ಕಾರ ಕೊಟ್ಟ ಕಾನೂನು. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಹೊಸ ಸರ್ಕಾರ ಆ ಕಾನೂನು ತೆಗೆದು ಹಾಕಿತು. ಅಂದರೆ ಇದರರ್ಥ ನೀವೂ ಕೂಡ ಮತಾಂತರ ಮಾಡಬಹುದು. ಸರ್ಕಾರವೇ ಹೇಳಿದೆ ಮತಾಂತ ಮಾಡಿ ಅಂತ. ಹಾಗಿದ್ದಾಗ ನಾವೂ ಮಾಡಬೇಕಲ್ವಾ? ಜಗತ್ತಿನ ಯಾವ ರಾಅಷ್ಟ್ರದಲ್ಲಿಯೂ ಈ ರೀತಿ ಪರಿಸ್ಥಿತಿ ಇಲ್ಲ. ಹಾಗಾಗಿ ಮತಾಂತರ ಮಾಡಿ. ಸರ್ಕಾರವೇ ಹೇಳಿರುವಾಗ ನಿಮಗೆ ಮಾಡಲು ಕಷ್ಟವೇನು? ಎಂದು ಪ್ರಶ್ನಿಸಿದ್ದಾರೆ.
ಜನಸಂಖ್ಯೆ ಜಾಸ್ತಿ ಮಾಡಲು ಸರ್ಕಾರವೇ ಕೊಟ್ಟ ಇಂಥಹ ಕಾನೂನುಗಳು ನಮ್ಮಲ್ಲಿವೆ. ಹಾಗಾಗಿ ಸಂಖ್ಯೆ ವಿಸ್ತರಿಸಲು ಈ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ಭಾರತ ಬಿಟ್ಟು ಕೊಟ್ಟು ಹೋಗುವಾಗ ಅದಕ್ಕೆ ಸ್ವಲ್ಪ ಪಾಕಿಸ್ತಾನ, ಬಾಂಗ್ಲಾದೇಶ, ಅಗತ್ಯ ಬಿದ್ದರೆ ನೇಪಾಳವನ್ನೂ ಸೇರಿಸೋಣ. ಯಾರಾದರೂ ನಮಗೆ ಮತಾಂತರವಾಗಬೇಕು ಎಂದರೆ ನಮ್ಮ ಸಮಾಜ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ. ನೀವು ಒಮ್ಮೆ ಮುಕ್ತ ಕಂಠದಿಂದ ಕರೀರಿ. ಎಷ್ಟು ಜನ ಸೈಲೆಂಟಾಗಿ ಸೇರಿ ಕೊಳ್ತಾರೆ ನೋಡಿ. ಹಾಗಾಗಿ ಹಿಂದೂಗಳು ಮತಾಂತರ ಮಾಡಿ ಎಂದು ಕರೆ ನೀಡಿದ್ದಾರೆ.