BREAKING: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿ ನೀಡಲು ಕೇಂದ್ರ ಒಪ್ಪಿಗೆ

ಬೆಂಗಳೂರು: ಸುಮಾರು ಒಂದು ವರ್ಷದ ನಂತರ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಬಿಕ್ಕಟ್ಟು ಬಗೆಹರಿದಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರವು ಆದೇಶ ನೀಡಿದ ತಕ್ಷಣ ಕೇಂದ್ರವು ಅಗತ್ಯ ಪ್ರಮಾಣದ ಅಕ್ಕಿಯನ್ನು ನೀಡುತ್ತದೆ ಎಂದು ಖಚಿತಪಡಿಸಿದ್ದಾರೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ(ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿಯನ್ನು ಪೂರೈಸಲು ಕೇಂದ್ರವು ಒಪ್ಪಿಗೆ ನೀಡಿದೆ. ಕಳೆದ ವಾರ ದೆಹಲಿಯಲ್ಲಿ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಜೋಶಿ ನಡುವೆ ನಡೆದ ಸಭೆಯ ನಂತರ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಕೇಂದ್ರದಿಂದ ಹೆಚ್ಚುವರಿ 5 ಕೆಜಿ ಸಿಗದ ಕಾರಣ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ನಡೆದಿತ್ತು, ನಂತರದಲ್ಲಿ ಹೆಚ್ಚುವರಿ 5ಕೆಜಿ ಅಕ್ಕಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.

ರಾಜ್ಯವು ಕೆಜಿಗೆ 34 ರೂಪಾಯಿ ನೀಡುವುದಾಗಿ ಹೇಳುತ್ತಿದ್ದರೂ, ಭಾರತೀಯ ಆಹಾರ ನಿಗಮ(ಎಫ್‌ಸಿಐ) ಅಕ್ಕಿಯನ್ನು ಪೂರೈಸಲು ಕೇಂದ್ರವು ಅಡ್ಡಿಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಆರೋಪಿಸಿದ್ದರು. ಈ ವಿಚಾರವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಯನ್ನೂ ನಡೆಸಲಾಗಿತ್ತು.

ಇದೀಗ ಕೇಂದ್ರದಿಂದ ಅಕ್ಕಿ ನೀಡಲು ಒಪ್ಪಿಗೆ ದೊರೆತಿದೆ. ಕಳೆದ ವರ್ಷ ದೇಶಾದ್ಯಂತ ಭೀಕರ ಬರಗಾಲದ ಹಿನ್ನೆಲೆಯಲ್ಲಿ ದಾಸ್ತಾನು ಕೊರತೆ ಆತಂಕದಿಂದಾಗಿ ಕೇಂದ್ರವು ಅಕ್ಕಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ 5 ಕೆಜಿ ಉಚಿತ ಅಕ್ಕಿ ನೀಡುವ ಭರವಸೆ ನೀಡುವ ಅನ್ನ ಭಾಗ್ಯ ಯೋಜನೆಯನ್ನು ಪೂರೈಸಲು ಕರ್ನಾಟಕಕ್ಕೆ 2,36,000 ಟನ್ ಅಕ್ಕಿ ಅಗತ್ಯವಿದೆ.

ಕರ್ನಾಟಕದ ಅನ್ನ ಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿ ದಾಸ್ತಾನನ್ನು ನಾವು ಖಚಿತಪಡಿಸಿದ್ದೇವೆ ಮತ್ತು ರಾಜ್ಯ ಸರ್ಕಾರವು ಆದೇಶವನ್ನು ನೀಡಿದರೆ ಅದನ್ನು ಪೂರೈಸಲು ಸಿದ್ಧರಿದ್ದೇವೆ. ಕಾರ್ಯಗತಗೊಳಿಸಲು ಸಾಕಷ್ಟು ಸ್ಟಾಕ್ ಇದೆ ಎಂದು ಜೋಶಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read