ಬೆಂಗಳೂರು: ಕುಡಿಯುವ ನೀರು, ಜೀವಜಲವೇ ವಿಷವಾದರೆ ಬದುಕುವುದಾದರೂ ಹೇಗೆ? ಇಂಥದ್ದೊಂದು ಆಘಾತಕಾರಿ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ. ಕಾವೇರಿ ನದಿ ಸೇರಿದಂತೆ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ.
12 ನದಿಗಳ ನೀರನ್ನು 32 ಕಡೆ ಪರಿಶೀಲನೆ ನಡೆಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನದಿಗಳ ನೀರಿನಲ್ಲಿ ಆಮ್ಲಜನಕ ಕೊರತೆ ಇದೆ ಎಂದು ವರದಿ ನೀಡಿದೆ. ಪರೀಕ್ಷೆಗೆ ಒಳಪಟ್ಟ 12 ನದಿಗಳಲ್ಲಿ ಒಂದೇ ಒಂದು ನದಿಗೂ ‘ಎ’ ದರ್ಜೆ ಸಿಕ್ಕಿಲ್ಲ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ನದಿಗಳ ನೀರಿನ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 12 ನದಿಗಳ ನೀರಿನಲ್ಲಿ ಆಮ್ಲಜನಕ ಕೊರತೆಯಿರುವುದು ಪತ್ತೆಯಾಗಿದೆ.
ಜೀವನದಿ ಕಾವೇರಿ ಸೇರಿದಂತೆ ಪ್ರಮುಖ ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆಯಿದೆ. ನದಿಗಳ ನೀರು ಕಲುಷಿತವಾಗಿವೆ. 12 ನದಿಗಳ ಪೈಕಿ ನೇತ್ರಾವತಿ ನದಿಗೆ ಮಾತ್ರ ‘ಬಿ’ ದರ್ಜೆ ಸಿಕ್ಕಿದೆ ಇದನ್ನು ಸ್ನಾನ ಹಾಗೂ ಗೃಹಬಳಕೆಗೆ ಉಪಯೋಗಿಸಬಹುದಾಗಿದೆ. 8 ನದಿಗಳಿಗೆ ‘ಸಿ’ ದರ್ಜೆ, 3 ನದಿಗಳಿಗೆ ‘ಡಿ’ ದರ್ಜೆ ಎಂದು ವರದಿ ನೀಡಲಾಗಿದೆ.
ಲಕ್ಷ್ಮಣತೀರ್ಥ, ತುಂಗಭದ್ರಾ, ಕಾವೇರಿ, ಕಬಿನಿ, ಸಿಂಷಾ, ಕೃಷ್ಣಾ ನದಿಗೆ ‘ಸಿ’ ದರ್ಜೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಭೀಮಾನದಿ, ಕಾಗಿಣಾ ಹಾಗೂ ಅರ್ಕಾವತಿ ನದಿಗಳಿಗೆ ‘ಡಿ’ ದರ್ಜೆ ನೀಡಲಾಗಿದೆ.