ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಗುರುವಾರ ತಡರಾತ್ರಿ ತನ್ನ ಕುಟುಂಬದ ಸದಸ್ಯರೇ ಗಂಭೀರ ಸ್ಥಿತಿಯಲ್ಲಿ ವೃದ್ಧ ಮಹಿಳೆಯನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದು, ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇ-ರಿಕ್ಷಾ ಚಾಲಕನ ಸಹಾಯದಿಂದ ಇಬ್ಬರು ಮಹಿಳೆಯರು ರಾತ್ರಿಯ ವೇಳೆ ಕಿಶುನ್ ದಾಸ್‌ಪುರ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಮಹಿಳೆಯನ್ನು ಬಿಟ್ಟು ಹೋಗಿರುವುದು ಕಂಡು ಬಂದಿದೆ.
ಪೊಲೀಸರ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಪ್ರಜ್ಞಾಹೀನ ವೃದ್ಧ ಮಹಿಳೆಯನ್ನು ಇಬ್ಬರು ಮಹಿಳೆಯರು ಇ-ರಿಕ್ಷಾದಲ್ಲಿ ಕರೆದುಕೊಂಡು ಬಂದು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳೀಯರು ಮಾತನಾಡಿಸಿದಾಗ ಸಂತ್ರಸ್ತ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ದರ್ಶನನಗರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಅಲ್ಲಿ ಚಿಕಿತ್ಸೆ ನೀಡಲಾಯಿತು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದು, ಇಬ್ಬರು ಮಹಿಳೆಯರು ಮತ್ತು ಇ-ರಿಕ್ಷಾ ಚಾಲಕನ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.