ಬೆಂಗಳೂರು: ವಿರೋಧ, ಗೊಂದಲ. ವಿವಾದದ ನಡುವೆ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ಆರಂಭವಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಜಾತಿ ಗಣತಿಗೆ ಮೊದಲ ದಿನವೇ ವಿಘ್ನ ಎದುರಾಗಿದೆ.
20 ಲಕ್ಷ ಗುರಿಯ ಬದಲು ಕೇವಲ 10 ಸಾವಿರ ಜನರ ಸಮೀಕ್ಷೆ ನಡೆಸಲಾಗಿದೆ. ಇಂಟರ್ನೆಟ್ ಇಲ್ಲದ ಕಡೆಗಳಲ್ಲಿ ಸಮೀಕ್ಷೆಯ ಕಾರ್ಯನಿರ್ವಹಿಸಿಲ್ಲ. ಅಂತಹ ಕಡೆ ಶಾಲೆ, ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ತೆರೆಯಲಾಗುವುದು.
ಸಮೀಕ್ಷೆ ಕಿಟ್ ಗಳನ್ನು ಕೆಲವು ಕಡೆ ವಿಳಂಬವಾಗಿ ವಿತರಿಸಲಾಗಿದೆ. ಕೆಲವು ಗಣತಿದಾರರಿಗೆ ಆಪ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದು ಕೂಡ ಗಣತಿಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ. ಇನ್ನು ಇಂಟರ್ನೆಟ್ ಇಲ್ಲದ ಕಡೆ ಆಪ್ ಕಾರ್ಯನಿರ್ವಹಿಸಿದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಕ್ರಮ ಕೈಗೊಂಡಿದೆ.
ಮೊದಲ ದಿನ ಗಣತಿದಾರರು ಗಕಿಟ್ ಸಂಗ್ರಹಿಸುವುದು, ಬ್ಲಾಕ್ ಪತ್ತೆ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸುವುದು, ಆಪ್ ಡೌನ್ಲೋಡ್, ತಾಂತ್ರಿಕ ಸಮಸ್ಯೆ, ನೆಟ್ವರ್ಕ್ ಸಮಸ್ಯೆ, ಒಟಿಪಿ ಬಾರದಿರುವಂತಹ ಸಣ್ಣ ಪುಟ್ಟ ಸಮಸ್ಯೆಯಾಗಿದ್ದು, ಮಂಗಳವಾರದಿಂದ ಸಮೀಕ್ಷೆಗೆ ವೇಗ ಸಿಗುತ್ತದೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ್ ತಿಳಿಸಿದ್ದಾರೆ.