ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಬ್ಬರು ಸಚಿವರ ನಡುವೆಯೇ ಜಟಾಪಟಿ ನಡೆದಿದೆ ಎನ್ನಲಾಗಿದೆ.
ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ನಡುವೆ ವಾಗ್ವಾದ ನಡೆದಿದ್ದು, ಸಚಿವ ಮಹದೇವಪ್ಪ ರೋಷಾವೇಶಗೊಂಡಿದ್ದಾರೆ. ಗಂಗಾಕಲ್ಯಾಣ ಯೋಜನೆ ಅನುದಾನ ಬಿಡುಗಡೆ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು ಸಂಪುಟ ಸಹೋದ್ಯೋಗಿಗಳ ಮೇಲೆಯೇ ಗರಂ ಆಗಿದ್ದಾರೆ. ಇದರಿಂದ ಸಹೋದ್ಯೋಗಿಗಳು ದಂಗಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳದೇ ನೇರವಾಗಿ ಸಂಪುಟ ಸಹೋದ್ಯೋಗಿಗಳ ಮೇಲೆ ರೇಗಾಡಿದ್ದಾರೆ ಎನ್ನಲಾಗಿದೆ. ಗಂಗಾ ಕಲ್ಯಾಣ ಯೋಜನೆ ವಿಷಯದಲ್ಲಿ ಸಚಿವರುಗಳ ನಡುವೆ ವಾಕ್ಸಮರವಾಗಿದ್ದು, ಎಸ್ ಸಿಪಿ, ಟಿಎಸ್ ಪಿ ಅನುದಾನ ಹಂಚಿಕೆಯಾಗಿಲ್ಲ. ಹಣ ಎಲ್ಲಿ ಹೋಯಿತು? ಎಂದು ಮಹದೇವಪ್ಪ ಪ್ರಶ್ನಿಸಿದ್ದಾರೆ. ನಾನು ಸಂಪುಟ ಸಭೆಯಿಂದ ಹೊರಟು ಹೋಗ್ತೀನಿ ಎಂದು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಬಳಿಕ ಸಂಪುಟ ಸಹೋದ್ಯೋಗಿಗಳೇ ಸಚಿವರನ್ನು ಸಮಾಧಾನಪಡಿಸಿ ಮನವೊಲಿಸಿದ್ದಾರೆ ಎನ್ನಲಾಗಿದೆ.
