ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ನೌಕರರ ವಿರುದ್ಧ ಇರುವ ಬಾಕಿ ಅಭಿಯೋಜನೆ ಮಂಜೂರಾತಿಗೆ ಒಂದು ತಿಂಗಳ ಕಾಲಮಿತಿಯನ್ನು ಸಚಿವ ಸಂಪುಟ ಸಭೆ ನಿಗದಿಪಡಿಸಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಕ್ಷಮ ಪ್ರಾಧಿಕಾರಗಳಲ್ಲಿ ವಿಚಾರಣೆಗೆ ಅನುಮತಿ ಬಾಕಿ ಇರುವ ಎಲ್ಲಾ ಪ್ರಕರಣಗಳಲ್ಲಿ ಒಂದು ತಿಂಗಳ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕು. ತೆಗೆದುಕೊಂಡ ಕ್ರಮದ ಕುರಿತಾಗಿ ವರದಿ ನೀಡಬೇಕು ಎಂದು ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ತಡೆ ಅಧಿನಿಯಮದಡಿ ಅಭಿಯೋಜನೆಗೆ ಮಂಜೂರಾತಿ ನೀಡಲು ಸುಪ್ರೀಂ ಕೋರ್ಟ್ ಆದೇಶದಂತೆ ನಿಗದಿಯಾಗಿರುವ ಕಾಲಮಿತಿ ಪಾಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.