ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹಿಂಡ್ಲವಾಡಿ ಗ್ರಾಮದ 75 ಎಕರೆ ಪ್ರದೇಶದಲ್ಲಿ 2350 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಗೃಹ ಮಂಡಳಿ ಬೆಂಗಳೂರು ಸೂರ್ಯ ನಗರ ನಾಲ್ಕನೇ ಹಂತದ ಬಡಾವಣೆಯ ಸಮಗ್ರ ಅಭಿವೃದ್ಧಿ ಯೋಜನೆ ಅಡಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ. 80,000 ಆಸನ ವ್ಯವಸ್ಥೆಯ ಮೂಲಕ ದೇಶದ ಅತಿ ದೊಡ್ಡ ಸ್ಟೇಡಿಯಂಗಳಲ್ಲಿ ಇದು ಒಂದಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಹಳೆಯದಾಗಿದ್ದು 38,000 ಆಸನ ವ್ಯವಸ್ಥೆ ಮಾತ್ರ ಹೊಂದಿದೆ. ಬೆಂಗಳೂರಿಗಿಂತ ಚಿಕ್ಕ ನಗರಗಳಲ್ಲಿ ದೊಡ್ಡ ಸ್ಟೇಡಿಯಂಗಳು ಇವೆ. ಆಧುನಿಕ ಸೌಲಭ್ಯಗಳು, ಇಂದಿನ ಕ್ರೀಡಾ ಅಗತ್ಯತೆಗೆ ಅನುಸಾರವಾಗಿ ಹೊಸ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.