ಬೆಂಗಳೂರು: ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವ್ಯವಸ್ಥೆ ಅಳವಡಿಕೆಗೆ ಅವಕಾಶ ಕಲ್ಪಿಸುವುದು, ಒಬಿಸಿ ನಿರುದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನ ಖರೀದಿಗೆ ಸಹಾಯಧನ ದೇವದಾಸಿಯರ ಮಕ್ಕಳ ಕಲ್ಯಾಣಕ್ಕೆ ವಿವಿಧ ಸೌಲಭ್ಯ ಸೇರಿದಂತೆ 17 ವಿಧೇಯಕಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಸಹಕಾರ ಸಂಘಗಳು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೂ ಸ್ಥಾನಮಾನ ಕಲ್ಪಿಸಲು ಆಯ್ದ ನಿರ್ದೇಶಕ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಸರ್ಕಾರ ಮುಂದಾಗಿತ್ತು. ಈ ನಾಮನಿರ್ದೇಶಕ ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು. ನಂತರ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದ ಹಿನ್ನೆಲೆಯಲ್ಲಿ ನಾಮನಿರ್ದೇಶಕ ಸದಸ್ಯರಿಗೆ ಮತದಾನದ ಹಕ್ಕು ನೀಡುವ ಪ್ರಸ್ತಾಪವನ್ನು ಸರ್ಕಾರ ತಿದ್ದುಪಡಿ ವಿಧೇಯಕದಲ್ಲಿ ಕೈಬಿಟ್ಟಿದೆ. ಈ ಸಂಘಗಳ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನೀಡಲು ಅವಕಾಶ ಕಲ್ಪಿಸುವ ಅಂಶವು ತಿದ್ದುಪಡಿ ವಿಧೇಯಕದಲ್ಲಿದೆ.
ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನ ಖರೀದಿಸಿ ಆಹಾರ ಕಿಯೋಸ್ಕ್ ಪ್ರಾರಂಭಿಸಲು ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಹಾಯಧನ ಮಿತಿಯಲ್ಲಿ 1103 ವಾಹನ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ವಿವಾಹಿತ ಪುತ್ರಿಗೂ ಅನುಕಂಪದ ಉದ್ಯೋಗ ನೀಡಲಾಗುವುದು. ಕುಟುಂಬ ಸದಸ್ಯರು ಎಂಬ ವ್ಯಾಖ್ಯಾನದಲ್ಲಿ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು, ವಿಧವಾ ಮೊಮ್ಮಗಳು ಎಂಬ ಪದಗಳ ನಂತರ ವಿವಾಹಿತ ಮಗಳೆಂಬ ಪದಗಳನ್ನು ಸೇರಿಸುವ ಸಂಬಂಧ ನಿಯಮಾವಳಿ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ವಿವಾಹಿತ ಮಗಳಿಗೂ ಅನುಕಂಪದ ಉದ್ಯೋಗ ಸಿಗಲಿದೆ ಎಂದು ತಿಳಿಸಿದ್ದಾರೆ.