ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಕೈತಪ್ಪಿತ್ತು. ಇದರಿಂದ ಪಕ್ಷದ ವಿರುದ್ಧವೇ ಸಿಡಿದೆದ್ದಿದ್ದ ಈಶ್ವರಪ್ಪ, ಶಿವಮೊಗ್ಗದಿಂದ ತಾವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಕಾಂತೇಶ್ ಸ್ಪರ್ಧೆ ಮಾಡಲಿದ್ದಾರಾ? ಎಂಬ ಕುತೂಹಲ ಮೂಡಿದೆ.
ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂತೇಶ್ ಈಶ್ವರಪ್ಪ ಸ್ಪರ್ಧೆ ಮಾಡಲಿದ್ದಾರಾ? ಎಂಬ ಚರ್ಚೆ ಆರಂಭವಾಗಿದ್ದು, ಈ ಬಗ್ಗೆ ಸ್ವತಃ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿಗ್ಗಾವಿ ಉಪಚುನಾವಣೆಗೆ ಕಾಂತೇಶ್ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದರು. ಹಾವೇರಿ ಜನ ಮನೆಗೆ ಬಂದು ನಿಮಗೆ ಮೋಸ ಆಯ್ತು ಅಂತಿದ್ದಾರೆ. ಈಗ ಉಪಚುನಾವಣೆಗೆ ಮಗ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದರು.
ಕಾಲಚಕ್ರ ಎನ್ನುವುದು ತಿರುಗುತ್ತಿರುತ್ತದೆ. ಕಾಲ ಹೀಗೇ ಇರುವುದಿಲ್ಲ. ಮೋಸ ಮಾಡಿದವರು ಅನುಭವಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.