ಬೆಂಗಳೂರು: ರಾಜ್ಯಾದ್ಯಂತ ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ನಡೆಸುತ್ತೇವೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಆನಂತ ಸುಬ್ಬರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಬಸ್ ಗಳನ್ನು ಡಿಪೋಗಳಲ್ಲಿ ನಿಲ್ಲಿಸುತ್ತೇವೆ. ಯಾವುದೇ ನೌಕರರು ನಾಳೆ ಬಸ್ ಗಳನ್ನು ಓಡಿಸುವುದಿಲ್ಲ. ಸರ್ಕಾರದ ಬೆದರಿಕೆಗೆ ಹೆದರಬೇಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಕರೆ ನೀಡಿದ್ದಾರೆ.
ಮುಷ್ಕರದ ಬಗ್ಗೆ 22 ದಿನಗಳ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಇಂದು ಸಭೆ ಕರೆದಿದ್ದಾರೆ. ಬಾಕಿ ಹಣ ಕೊಡಬೇಕು, ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಬೇಕು. ಬೇಕಿದ್ದರೆ ಕಂತಿನ ರೂಪದಲ್ಲಿ ಬಾಕಿ ಕೊಡಿ ಎಂದು ಮನವಿ ಮಾಡಿದ್ದೇವೆ. 12 ಬೇಡಿಕೆಗಳ ಪೈಕಿ ಎರಡು ಪ್ರಮುಖ ಬೇಡಿಕೆಗಳನ್ನಾದರೂ ಈಡೇರಿಸಬೇಕಿತ್ತು. ಅಧಿವೇಶನದವರೆಗೆ ಮುಷ್ಕರ ಮುಂದೂಡಿ ಎಂದು ಹೇಳಿದ್ದಾರೆ. ನಾವು ಒಪ್ಪಿಲ್ಲ. ಹೀಗಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಾರಿಗೆ ಮುಷ್ಕರ ನಡೆಸಲಾಗುವುದು ಎಂದು ಹೇಳಿದ್ದಾರೆ.