ತುಮಕೂರು: ಏರುಗತಿಯಲ್ಲಿ ಸಾಗುತ್ತಿರುವ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಜಿಲ್ಲೆಯ ತಿಪಟೂರು ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಲ್ ಕೊಬ್ಬರಿ ಬರೋಬ್ಬರಿ 26,167 ರೂ. ಗರಿಷ್ಠ ದರ ದಾಖಲಿಸಿದೆ.
ಕೊಬ್ಬರಿ ದರ ಯಾರೂ ನಿರೀಕ್ಷಿಸದ ರೀತಿಯಲ್ಲಿ ಏರಿಕೆ ಕಾಣುತ್ತಿದ್ದು, ಕಲ್ಪತರು ನಾಡಿನ ಜನರಿಗೆ ಅಚ್ಚರಿ ತಂದಿದೆ. ಜಿಲ್ಲೆಯಲ್ಲಿ ತೆಂಗಿನ ಇಳುವರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ. ರೈತರು ದರ ನೋಡಿ ಖುಷಿ ಪಡುವಂತಾಗಿದೆ. ಸೋಮವಾರ ಮಾರುಕಟ್ಟೆಗೆ 3351 ಕ್ವಿಂಟಲ್ ಕೊಬ್ಬರಿ ಬಂದಿದ್ದು, ಸರಾಸರಿ ದರ 25,300 ರೂಪಾಯಿಯಂತೆ ಮಾರಾಟವಾಗಿದೆ.
ಕ್ವಿಂಟಲ್ ಕೊಬ್ಬರಿ ಕನಿಷ್ಠ ದರ 23 ಸಾವಿರ ರೂ., ಗರಿಷ್ಠ ದರ 26,167 ರೂ.ಗೆ ಮಾರಾಟವಾಗಿದ್ದು, ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ. ಕೊಬ್ಬರಿ ಬೆಲೆ ಹೆಚ್ಚಳವಾಗಿರುವುದರ ಜೊತೆಗೆ ಕೊಬ್ಬರಿ ಎಣ್ಣೆ ಬೆಲೆ ಕೂಡ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ 15 ಕೆಜಿ ಕೊಬ್ಬರಿ ಎಣ್ಣೆಗೆ 5,500 ರೂ. ದರ ದಾಟಿದೆ. ಕಳೆದ ಒಂದು ತಿಂಗಳಿನಲ್ಲಿ ಈ ದರ 600 ರೂ.ನಷ್ಟು ಹೆಚ್ಚಳವಾಗಿದೆ.