ಮದುವೆ ಮಂಟಪದಿಂದ ನೇರ ಠಾಣೆಗೆ ತೆರಳಿ ದೂರು ನೀಡಲು ವಧುವಿಗಿತ್ತು ಆ ಒಂದು ಕಾರಣ….!

ಮದುವೆ ಕೇವಲ ಹೆಣ್ಣು – ಗಂಡು ಮಾತ್ರವಲ್ಲ ಎರಡು ಕುಟುಂಬಗಳನ್ನು ಬೆಸೆಯುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಮದುವೆಗಳ ಸಂದರ್ಭದಲ್ಲಿ ಬಂಧು- ಬಾಂಧವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಆದರೆ ಎಲ್ಲ ಮದುವೆಗಳು ಸುಖಾಂತ್ಯವಾಗುವುದಿಲ್ಲ ಎಂಬುದಕ್ಕೆ ಸಾಕ್ಷಿ ಇಲ್ಲಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಲಂಬಾ ಕಿ ಧಾನಿ ಗ್ರಾಮದಲ್ಲಿ ನವೆಂಬರ್ 12 ರಂದು ವಧು ತನ್ನ ಮದುವೆಯಿಂದ ಹೊರನಡೆದು ವರನ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಘಟನೆ ನಡೆದಿದೆ.

ವರ ವಿಕ್ರಮ್ ಮತ್ತು ಆತನ ಪರಿವಾರ ವಧು ಮಂಜು ಜಖರ್ ಅವರ ನಿವಾಸಕ್ಕೆ ಆಗಮಿಸುವುದರೊಂದಿಗೆ ಸಮಾರಂಭವು ಸಾಂಪ್ರದಾಯಿಕವಾಗಿ ಪ್ರಾರಂಭವಾಗಿತ್ತು. ಹೂಮಾಲೆಗಳ ವಿನಿಮಯದೊಂದಿಗೆ ಉತ್ಸವ ಸುಗಮವಾಗಿ ನಡೆದಿತ್ತು. ಮದುವೆಯಲ್ಲಿ ನಡೆಯುವ ತಮಾಷೆಯ ಘಟನೆಯಂತೆ ವಧುವಿನ ಸಹೋದರಿಯರು ವರನ ಶೂ ಬಚ್ಚಿಟ್ಟು ಹಣ ಕೇಳಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಆಚರಣೆಯ ಭಾಗವಾಗಿ ವಧುವಿನ ಸಹೋದರಿಯರು 11,000 ರೂ.ಗಳನ್ನು ಕೇಳಿದಾಗ, ವರ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾನೆ. ಅವನು ಹಣ ನೀಡಲು ನಿರಾಕರಿಸಿದ್ದಲ್ಲದೆ ವಧುವಿನ ಸಹೋದರಿಯರಿಗೆ ನಿಂದನಾತ್ಮಕ ಭಾಷೆ ಪ್ರಯೋಗಿಸಿದ್ದಾನೆ. ವರನ ಅಶಿಸ್ತಿನ ವರ್ತನೆ ಹೆಚ್ಚಾದ ಕಾರಣ, ಪರಿಸ್ಥಿತಿಯನ್ನು ತಿಳಿಗೊಳಿಸಲು ಎಲ್ಲರೂ ಮಾಡಿದ ಪ್ರಯತ್ನಗಳು ವಿಫಲವಾದವು.

ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮದುವೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ ವರ ಇದ್ದಕ್ಕಿದ್ದಂತೆ ₹ 5 ಲಕ್ಷ ನಗದು ಮತ್ತು ಬುಲೆಟ್ ಮೋಟಾರ್ ಸೈಕಲ್ ಗೆ ಬೇಡಿಕೆ ಇಟ್ಟಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ವಧುವಿನ ತಂದೆ ತಮ್ಮ ಆರ್ಥಿಕ ಮಿತಿಗಳನ್ನು ವಿವರಿಸಿದರೂ, ವರ ಹಠಮಾರಿತನ ಬಿಟ್ಟಿಲ್ಲ.

ಇದೆಲ್ಲ ನೋಡಿದ ವಧು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಮದುವೆ ಮಂಟಪದಿಂದ ಹೊರಬಂದು ವರನ ವಿರುದ್ಧ ದೂರು ದಾಖಲಿಸಲು ಹತ್ತಿರದ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಅಧಿಕಾರಿಗಳು ಮಧ್ಯಪ್ರವೇಶಿಸಿ, ಎರಡು ಕುಟುಂಬಗಳ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ ವರ ಬಗ್ಗಲು ನಿರಾಕರಿಸಿದಾಗ, ಅವನನ್ನು ಬಂಧಿಸಲಾಗಿದ್ದು, ಮದುವೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read