ಕೊಪ್ಪಳ: ಜಾತಿ ನಿಂದನೆ ಮಾಡಿ ಮಹಿಳೆಯ ಫೋಟೋಗಳನ್ನು ಜಾಲತಾಣ ವಾಟ್ಸಾಪ್ ನಲ್ಲಿ ಸ್ಟೇಟಸ್ ಗೆ ಹಾಕಿ ಬೆದರಿಕೆ ಹಾಕಿದ್ದರಿಂದ ಮನನೊಂದ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ ನಡೆದಿದೆ.
ಪಾರ್ವತಿ ರಮೇಶ ವಡ್ಡರ(23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಯುವಕನೊಬ್ಬ ಮೊಬೈಲ್ ನಲ್ಲಿ ಪಾರ್ವತಿ ಅವರ ಫೋಟೋ, ವಿಡಿಯೋಗಳನ್ನು ಸ್ಟೇಟಸ್ ಹಾಕಿದ್ದಲ್ಲದೆ ಮತ್ತಷ್ಟು ಫೋಟೋ, ವಿಡಿಯೋ ಹಾಕುವುದಾಗಿ ಬೆದರಿಸಿದ್ದರಿಂದ ಮರ್ಯಾದೆಗೆ ಅಂಜಿದ ಪಾರ್ವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಮನೂರಪ್ಪ, ಮಧುರಾಜ್, ನಿರುಪಾದಿ ಹೆಸರನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆಗಸ್ಟ್ 31ರಂದು ಪಾರ್ವತಿ ಅವರ ಪಾನ್ ಶಾಪ್ ಗೆ ಬಂದಿದ್ದ ಯಮನೂರಪ್ಪ ಸ್ವೀಟ್ ತಿಂದು ಹಣ ಕೊಟ್ಟಿರಲಿಲ್ಲ. ಈ ವಿಚಾರಕ್ಕೆ ಜಗಳವಾಗಿತ್ತು. ಹಣ ಕೇಳಿದ್ದಕ್ಕೆ ಜಾತಿ ನಿಂದನೆ ಮಾಡಿದ್ದ. ಇದಕ್ಕೂ ಮೊದಲು ಪತಿ ರಮೇಶ್ ಮೊಬೈಲ್ ಪಾರ್ವತಿ ಬಳಿ ಇದ್ದಾಗ ವಿಡಿಯೋ ಕರೆ ಮಾಡಿದ್ದ ಯಮನೂರಪ್ಪ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು, ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದ. ಇದರಿಂದ ನೊಂದ ಪಾರ್ವತಿ ಸಾವಿಗೆ ಶರಣಾಗಿದ್ದಾರೆ. ಬೇವೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.