ಬೆಂಗಳೂರು: ಯುಜಿ ಸಿಇಟಿ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದ್ದು, ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.13 ಕೊನೆಯ ದಿನವಾಗಿದೆ.
ಯುಜಿಸಿಇಟಿ ಕೋರ್ಸ್‌ಗಳಿಗೆ ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಅಂತಹವರಿಗೆ ಯಾವುದೇ ಛಾಯ್ಸ್ ಆಯ್ಕೆಗೂ ಅವಕಾಶ ಇರುವುದಿಲ್ಲ.
ಸೆ.13ರಂದು ಮಧ್ಯಾಹ್ನ 2.30ರೊಳಗೆ ಶುಲ್ಕ ಪಾವತಿಸಿ, ಅಂದೇ ಸಂಜೆ 5.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.
ಹಿಂದಿನ ಸುತ್ತುಗಳಲ್ಲಿ ಶುಲ್ಕ ಅಥವಾ ಕಾಷನ್ ಡೆಪಾಸಿಟ್ ಪಾವತಿಸಿದ್ದರೆ ಅದನ್ನು ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಲಾಗುತ್ತದೆ.
UGNEET-25: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶ ಪ್ರಕಟಿಸಿದ ನಂತರ ಪ್ರಕಟಿಸಲಾಗುತ್ತದೆ. ಅಲ್ಲಿಯವರೆಗೂ ಸೀಟು ಹಂಚಿಕೆಯಾದವರು ಕಾಯಬೇಕಾಗುತ್ತದೆ.
ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಿದ್ದು, ಸೀಟು ಸಿಕ್ಕಿರುವವರಿಗೆ ಛಾಯ್ಸ್-1, 2 ಮತ್ತು 4 ಅನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಈ ಸುತ್ತಿನ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಮುಂದಿನ ಸುತ್ತುಗಳಲ್ಲಿ ಆಯುಷ್ ಕೋರ್ಸ್ ಕೂಡ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಜತೆಗೇ ಸೀಟು ಹಂಚಿಕೆ ನಡೆಯಲಿದೆ.
ಹಂಚಿಕೆಯಾಗದೆ ಉಳಿದಿರುವ 14,940 ಎಂಜಿನಿಯರಿಂಗ್ ಹಾಗೂ 413 ಆರ್ಕಿಟೆಕ್ಚರ್ ಕೋರ್ಸ್ ಗಳ ಸೀಟುಗಳನ್ನು ಆಯಾ ಕಾಲೇಜುಗಳಿಗೆ ಹಸ್ತಾಂತರಿಸಲಾಗಿದೆ.
ಪ್ರವೇಶಕ್ಕೆ ನಿಗದಿಪಡಿಸಿರುವ ಅಂತಿಮ ದಿನಾಂಕದ ನಂತರ ಉಳಿಯುವ ಹಂಚಿಕೆಯಾದ ಸೀಟುಗಳನ್ನೂ ನಂತರದ ದಿನಗಳಲ್ಲಿ ಕಾಲೇಜುಗಳಿಗೆ ಹಸ್ತಾಂತರಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
