ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಬಸ್ ಗೆ ಬೆಂಕಿ ತಗುಲಿ 19 ಪ್ರಯಾಣಿಕರು ಸಾವನ್ನಪ್ಪಿದ ಬೆನ್ನಲ್ಲೇ ಬಸ್ ಗಳಲ್ಲಿ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಾರಿಗೆ ನಿಗಮದ ನಾಲ್ವರು ಎಂಡಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದು, ಬಸ್ ಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಎಂಡಿ ಗಳಿಗೆ ಪತ್ರ ಬರೆದು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಸಾರಿಗೆ ಸಂಸ್ಥೆ ಬಸ್ ಗಳ ಸುರಕ್ಷತೆ ಪರಿಶೀಲನೆ ನಡೆಸಬೇಕು. ಬಸ್ ಗಳಲ್ಲಿ ಯಾವುದೇ ವಾಣಿಜ್ಯ ಸರಕು, ಲಗೇಜ್ ಗಳನ್ನು ಸಾಗಿಸುವ ವೇಳೆಯಲ್ಲಿ ಬೆಂಕಿ ಸ್ಪರ್ಶಕ್ಕೆ ಸರಳವಾಗಿ ಉರಿಯುವ ಅಥವಾ ಇತರೆ ಸ್ಪೋಟಕ ವಸ್ತು ಸಾಗಿಸದಂತೆ ನಿಗಾ ವಹಿಸಲು ಸೂಚನೆ ನೀಡಿದ್ದಾರೆ.
ಎಸಿ ಬಸ್ ಗಳಲ್ಲಿ ಅವಘಡದ ಸಂದರ್ಭದಲ್ಲಿ ಗಾಜು ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್ ಗಳನ್ನು ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸದ ಗಳ ನವೀಕರಣದ ಬಗ್ಗೆ ಪರಿಶೀಲನೆ ನಡೆಸಬೇಕು. ಯಾವುದೇ ನ್ಯೂನ್ಯತೆ ಕಂಡುಬಂದರೂ ಸಂಬಂಧಪಟ್ಟವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಾಣ ಹಾನಿಗೆ ಯಾವುದೇ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಬಸ್ ಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ತಂಡಗಳನ್ನು ರಚಿಸುವಂತೆ ಪತ್ರ ಬರೆದು ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.
