ಚಿಕ್ಕಮಗಳೂರು: ರಾತ್ರಿಯಿಡೀ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಭಾರಿ ಮಳೆ ನಡುವೆಯೂ ಬಿಂಡಿಗ ದೇವಿರಮ್ಮ ಬೆಟ್ಟವನ್ನು ಏರಿ ಭಕ್ತರು ಶಕ್ತಿ ದೇವತೆ ದರ್ಶನ ಪಡೆದಿದ್ದಾರೆ.
ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ 6000 ಅಡಿಗಳ ಎತ್ತರದ ದೇವಿರಮ್ಮ ಬೆಟ್ಟ ಏರಿ ಭಕ್ತರು ದೇವಿರಮ್ಮನ ದರ್ಶನ ಪಡೆದುಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಬೆಟ್ಟದ ಮೇಲೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಿನ್ನೆ ಬೆಟ್ಟ ಏರಿ 50,000ಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 3ಗಂಟೆ ವರೆಗೆ ಬೆಟ್ಟ ಹತ್ತಲು ಅವಕಾಶವಿದೆ. ಬೆಂಡಿಗ ದೇವಿರಮ್ಮ ಬೆಟ್ಟದಲ್ಲಿ ಮೂವರು ಭಕ್ತರು ಅಸ್ವಸ್ಥರಾಗಿದ್ದಾರೆ. ವ್ಯಕ್ತಿಯೊಬ್ಬರ ಕಾಲು ಮುರಿದಿದ್ದು, ಇಬ್ಬರು ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಸ್ಟ್ರೆಚರ್ ಮೂಲಕ ಅವರನ್ನು ಕೆಳಗೆ ಸಾಗಿಸಿದ ಅಗ್ನಿಶಾಮಕ ಸಿಬ್ಬಂದಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.