ಬೆಂಗಳೂರು: ಬೆಂಗಳೂರಿನಲ್ಲಿ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ 48 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. 48 ಲಕ್ಷ ಮಾಡಿ ಆಯುರ್ವೇದಿಕ್ ಔಷಧಿಯನ್ನು ಖರೀದಿಸಿದ ಟೆಕ್ಕಿ ವಂಚನೆಗೆ ಒಳಗಾಗಿದ್ದಲ್ಲದೆ ತನ್ನ ಕಿಡ್ನಿಯನ್ನೂ ಕಳೆದುಕೊಂಡಿದ್ದಾರೆ.
ತೇಜಸ್ ಕಿಡ್ನಿ ಕಳೆದುಕೊಂಡ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಫುಟ್ಪಾತ್ ಪಕ್ಕದ ಟೆಂಟ್ ನಲ್ಲಿ ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಅವರಿಗೆ ವಂಚಿಸಲಾಗಿದೆ. ಮೊದಲು ಕೆಂಗೇರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿಗೆ ಹೋಗಿದ್ದರು.
ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಎಂದು ಬೋರ್ಡ್ ಹಾಕಿದ್ದ ಹಿನ್ನೆಲೆಯಲ್ಲಿ ಟೆಂಟ್ ಗೆ ಭೇಟಿ ನೀಡಿದ್ದರು. ವಿಜಯ್ ಗುರೂಜಿಗೆ ಹೇಳಿ ಚಿಕಿತ್ಸೆ ಕೊಡಿಸುತ್ತೇನೆ ಎಂದು ಅಲ್ಲಿನ ವ್ಯಕ್ತಿ ಭರವಸೆ ನೀಡಿದ್ದ. ದೇವರಾಜ್ ಬೂಟಿ ಹೆಸರಿನ ಒಂದು ಗ್ರಾಂ ಔಷಧಿಗೆ 1.60 ಲಕ್ಷ ರೂಪಾಯಿ ನಿಗದಿ ಮಾಡಿದ್ದರು. ಯಶವಂತಪುರದ ಆಯುರ್ವೇದಿಕ್ ಶಾಪ್ ನಲ್ಲಿ ಖರೀದಿಸುವಂತೆ ಸಲಹೆ ನೀಡಿದ್ದರು.
ವಿಜಯಲಕ್ಷ್ಮಿ ಶಾಪ್ ನಲ್ಲಿ ಮಾತ್ರ ಔಷಧಿ ಖರೀದಿಸಬೇಕೆಂದು ಒತ್ತಾಯಿಸಿದ್ದರು ಆನ್ಲೈನ್ ಪೇಮೆಂಟ್ ಬೇಡ, ಯಾರ ಜೊತೆಗೂ ಬರಬಾರದು ಎಂದು ಷರತ್ತು ವಿಧಿಸಿದ್ದರು. ತೇಜಸ್ ಹಲವು ಬಾರಿ ದೇವರಾಜ ಬೂಟಿ ಮತ್ತು ಭವನ ಬೂಟಿ ತೈಲ ಖರೀದಿಸಿದ್ದರು. ಒಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ತೇಜಸ್ ಔಷಧ ಖರೀದಿಸಿದ್ದರು. ಚಿಕಿತ್ಸೆಯ ನಂತರ ಲೈಂಗಿಕ ಸಮಸ್ಯೆ ಪರಿಹಾರವಾಗಿರಲಿಲ್ಲ.
ಹಣದ ಕೊರತೆಯಿಂದ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಲ್ಲಿ ಲೋನ್ ಪಡೆದುಕೊಂಡಿದ್ದರು. 20 ಲಕ್ಷ ರೂಪಾಯಿ ಪಡೆದು ಒಟ್ಟು 18 ಗ್ರಾಂ ಔಷಧ ಖರೀದಿಸಿದ ತೇಜಸ್ ಗೆ ಸಮಸ್ಯೆ ಸರಿಯಾಗಿರಲಿಲ್ಲ. ಕೊನೆಗೆ ಆರೋಗ್ಯ ಸಮಸ್ಯೆಯಿಂದಾಗಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಟೆಕ್ಕಿ ತೇಜಸ್ ಅವರಿಗೆ ಕಿಡ್ನಿಗೆ ಸಮಸ್ಯೆಯಾಗಿರುವುದು ಪತ್ತೆಯಾಗಿದೆ. ವಿಜಯ್ ಗುರೂಜಿ, ವಿಜಯಲಕ್ಷ್ಮಿ ಆಯುರ್ವೇದಿಕ್ ವಿರುದ್ಧ ದೂರು ನೀಡಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
