ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಇಂದು ಮಧ್ಯಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಪಾಳದ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಮಧ್ಯಂತರ ಸರ್ಕಾರದ ಮುಖ್ಯಸ್ಥೆಯಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿಗಳ ನಿವಾಸ ಶೀತಲ್ ನಿವಾಸ್‌ನಲ್ಲಿ ರಾತ್ರಿ 8:45ಕ್ಕೆ (ಸ್ಥಳೀಯ ಸಮಯ) ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು.
ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಕರ್ಕಿ ಜುಲೈ 2016 ರಿಂದ ಜೂನ್ 2017 ರವರೆಗೆ ಸೇವೆ ಸಲ್ಲಿಸಿದ್ದರು. ಪರಿವರ್ತನಾ ನ್ಯಾಯ ಮತ್ತು ಚುನಾವಣಾ ವಿವಾದಗಳ ಕುರಿತಾದ ತೀರ್ಪುಗಳಿಗೆ ಹೆಸರುವಾಸಿಯಾದ ಅವರು 1979 ರಲ್ಲಿ ಕಾನೂನು ಅಭ್ಯಾಸ ಮಾಡಲು ಪ್ರಾರಂಭಿಸಿದರು, 2007 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು ಮತ್ತು 2009 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ದೇಶದ Gen-Z ಚಳವಳಿಯ ಪ್ರತಿಭಟನಾ ನಾಯಕರು ಅವರ ತಟಸ್ಥತೆ ಮತ್ತು ವಿಶ್ವಾಸಾರ್ಹತೆಯನ್ನು ಉಲ್ಲೇಖಿಸಿ ಅವರ ನೇಮಕಾತಿಯನ್ನು ಬೆಂಬಲಿಸಿದರು.
ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯ ನಂತರ ಸುಶೀಲಾ ಕರ್ಕಿ ಪ್ರಧಾನಿ ಹುದ್ದೆಗೇರಿದ್ದಾರೆ. ಭ್ರಷ್ಟಾಚಾರ ಮತ್ತು ರಾಜಕೀಯ ಅಸ್ಥಿರತೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ ನೇಪಾಳದ ಸಂಸತ್ತನ್ನು ವಿಸರ್ಜಿಸಲಾಗಿದೆ. ಪ್ರತಿಭಟನಾಕಾರರು ಎತ್ತಿದ ಬೇಡಿಕೆಗಳಲ್ಲಿ ವಿಸರ್ಜನೆಯೂ ಒಂದಾಗಿದ್ದರೂ, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಪಾಲಿಸುವಂತೆ ಕರೆ ನೀಡಿವೆ.