ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಜನಾ ಗರ್ಲಾನಿ ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತದ ಹಿನ್ನೆಲೆಯಲ್ಲಿ ರಾಹುಲ್ ತೋನ್ಸೆಗೆ ಶಿಕ್ಷೆ, ದಂಡ ವಿಧಿಸಲಾಗಿದೆ.
ಸಂಜನಾ ಗರ್ಲಾನಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಹುಲ್ ತೋನ್ಸೆಗೆ 61.50 ಲಕ್ಷ ರೂಪಾಯಿ ದಂಡ, 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.
2018-19ರಲ್ಲಿ ಸಂಜನಾ ಅವರಿಂದ 45 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿದೆ. ವಂಚನೆಯ ಪ್ರಕರಣ ಸಂಬಂಧ ರಾಹುಲ್ ತೋನ್ಸೆ ಅಪರಾಧಿ ಎಂಬುದು ಸಾಬೀತಾಗಿದೆ. ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋ ನಡೆಸುತ್ತಿದ್ದ ರಾಹುಲ್ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಪಡೆಯಬಹುದು ಎಂದು ಹಣ ಪಡೆದು ವಂಚಿಸಿದ್ದ.
ಇಂದಿರಾ ನಗರ ಠಾಣೆಯಲ್ಲಿ ರಾಹುಲ್ ತೋನ್ಸೆ ಮತ್ತು ಕುಟುಂಬದ ವಿರುದ್ಧ ಕೇಸ್ ದಾಖಲಾಗಿತ್ತು. ರಾಹುಲ್ ತಂದೆ ರಾಮಕೃಷ್ಣ, ತಾಯಿ ರಾಜೇಶ್ವರಿ ವಿರುದ್ಧ ಕೇಸ್ ದಾಖಲಾಗಿತ್ತು.