ಹುಬ್ಬಳ್ಳಿ: ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಹುಬ್ಬಳ್ಳಿ ಪೊಲೀಸರು ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಪಶ್ಚಿಮ ಬಂಗಾಳದ ಮಹಿಳೆ ಹಾಗೂ ನಾಲ್ವರು ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿಯ ವೇಳೆ ಹೋಟೆಲ್ ವ್ಯವಸ್ಥಾಪಕ, ಸಿಬ್ಬಂದಿ ಹಾಗೂ ಗ್ರಾಹಕ ಸೇರಿ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ರೆಸಿಡೆನ್ಸಿಯ ಎರಡನೇ ಮಹಡಿಯ ರೂಮ್ ಗಳಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ದಾಳಿ ನಡೆದಾಗ ತಪ್ಪಿಸಿಕೊಳ್ಳಲು ಶೌಚಾಲಯದ ಒಳಗಿದ್ದ ಅಡಗುತಾಣ ಪತ್ತೆಯಾಗಿದೆ. ದಾಳಿ ಸಂದರ್ಭದಲ್ಲಿ ಗ್ರಾಹಕನೊಬ್ಬ ಅದರಲ್ಲಿ ಬಚ್ಚಿಟ್ಟುಕೊಂಡಿದ್ದ.
ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನ್ಸಿ ಅವರಿಗೆ ಬಂದ ಮಾಹಿತಿ ಮೇರೆಗೆ ಪೊಲೀಸರ ಸಹಯೋಗದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ಸಂದರ್ಭದಲ್ಲಿ ತಮಿಳುನಾಡು ಆರೋಗ್ಯ ಇಲಾಖೆಯಿಂದ ವಿತರಿಸುವ ಸಾವಿರಾರು ಕಾಂಡೊಮ್ ಗಳು ಕಂಡು ಬಂದಿದೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.