ಬೆಂಗಳೂರು: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಜೀವಂತ ಸುಟ್ಟು ಹಾಕುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಬಗ್ಗೆ ಸಿದ್ದಣ್ಣ ತೇಜಿ, ಶಿವರಾಜ್ ಮುತ್ತಣ್ಣವರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಛಲವಾದಿ ನಾರಾಯಣ ಸ್ವಾಮಿ ಅವರ ಪರವಾಗಿ ಮಾಜಿ ಶಾಸಕ ವೈ. ಸಂಪಂಗಿ ಮತ್ತು ರಾಜ್ಯ ಬಿಜೆಪಿ ಕಾನೂನು ವಿಭಾಗದ ಸಂಚಾಲಕ ವಸಂತ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಗೆ ದೂರು ಸಲ್ಲಿಕೆಯಾಗಿದೆ.
ದೂರು ನೀಡಿದ ಬಳಿಕ ಮಾತನಾಡಿದ ವಸಂತ್ ಕುಮಾರ್, ಛಲವಾದಿ ನಾರಾಯಣಸ್ವಾಮಿ ಜೀವಂತ ಸುಟ್ಟು ಹಾಕುವುದಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಛಲವಾದಿ ನಾರಾಯಣ ಸ್ವಾಮಿ ಯಾವುದೇ ಜಾತಿ ನಿಂದನೆ ಮಾಡಿಲ್ಲ. ಹೀಗಿದ್ದರೂ ವಿಪಕ್ಷ ನಾಯಕರ ಮೇಲೆ ಅನುಮತಿ ಪಡೆಯದೆ ಎಫ್ಐಆರ್ ದಾಖಲಿಸಲಾಗಿದೆ. ಸಭಾಪತಿ, ರಾಜ್ಯಪಾಲರ ಅನುಮತಿ ಪಡೆಯದೆ ಕೇಸು ದಾಖಲಿಸಿದ್ದಾರೆ. ವಿಧಾನಸೌಧ ಮತ್ತು ಹೈಗ್ರೌಂಡ್ಸ್ ಪೋಲಿಸ್ ಠಾಣೆಗಳಲ್ಲಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ವಿರುದ್ಧ ಅನೇಕ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.