ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 11ನೇ ದಿನದ ಗಣೇಶ ವಿಸರ್ಜನೆ ವೇಳೆ ದುರ್ಘಟನೆ ಸಂಭವಿಸಿದೆ. ಜಿಲ್ಲೆಯ ಎರಡು ಕಡೆ ಗಣೇಶ ವಿಸರ್ಜನೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.
ಜಕ್ಕೇರಿ ಹೊಂಡದಲ್ಲಿ ಗಣೇಶ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ಬೆಳಗಾವಿ ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್(33) ಮೃತಪಟ್ಟಿದ್ದಾರೆ. ವಡ್ಡರವಾಡಿ ನಿವಾಸಿ ರಾಹುಲ್ ಜಕ್ಕೇರಿ ಹೊಂಡದಲ್ಲಿ ಗಣೇಶ ವಿಸರ್ಜನೆಗೆ ನೀರಿಗೆ ಇಳಿದಾಗ ನೀರಲ್ಲಿ ಮುಳುಗಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಜೊತೆಯಲ್ಲಿದ್ದವರು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲೇ ರಾಹುಲ್ ಮೃತಪಟ್ಟಿದ್ದಾರೆ. ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಲಪ್ರಭಾ ನದಿಯಲ್ಲಿ ಶುಭಂ ಕುಪ್ಪಟಗೇರಿ(22) ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗಾ ನಿವಾಸಿಯಾಗಿರುವ ಶುಭಂ ಯಡೋಗಾ -ಚಾಪಗಾವಿ ನಡುವಿನ ಮಲಪ್ರಭಾ ನದಿ ಸೇತುವೆಯ ಬಳಿ ಗಣೇಶ ಮೂರ್ತಿ ವಿಸರ್ಜಿಸಿ ಹಿಂತಿರುಗುವಾಗ ನೀರು ಪಾಲಾಗಿದ್ದಾರೆ. ಅವರಿಗಾಗಿ ಎಸ್.ಡಿ.ಆರ್.ಎಫ್. ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ನಂದಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.