ಶಿವಮೊಗ್ಗ: ಆಶ್ರಯ ಮನೆಗೆ ಖಾತೆ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಎ.ಪಿ. ಶಶಿಧರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ನೆಹರು ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಆಶ್ರಯ ವಿಭಾಗದ ಕಚೇರಿಯಲ್ಲಿ ಇಂದು ಸಂಜೆ ಶಶಿಧರ್ ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
10,000 ರೂ. ನಗದು ಸಹಿತ ಅಧಿಕಾರಿ ಎಪಿ ಶಶಿಧರ್ ನನ್ನು ವಶಕ್ಕೆ ಪಡೆಯಲಾಗಿದೆ. ಮಹಮ್ಮದ್ ಆಸೀಫ್ ಎಂಬುವರು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಖರೀದಿಸಿದ ನಿವೇಶನಕ್ಕೆ ಖಾತೆ ಮಾಡಿಕೊಡಲು ಶಶಿಧರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಹಣ ಕೇಳಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದ ಆಸೀಫ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಲಂಚ ಪಡೆಯುವಾಗ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಡಿವೈಎಸ್ಪಿ ಚಂದ್ರಶೇಖರ್, ಇನ್ ಸ್ಪೆಕ್ಟರ್ ಗುರುರಾಜ್ ಕೆ.ಪಿ., ಇನ್ ಸ್ಪೆಕ್ಟರ್ ಗಳಾದ ಗುರುರಾಜ್ ಮೈಲಾರ್, ವೀರಬಸಪ್ಪ ಎಲ್. ಕುಸಲಾಪುರ, ಸಿಬ್ಬಂದಿಗಳಾದ ಯೋಗೀಶ್, ಮಂಜುನಾಥ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ದೇವರಾಜ್, ಪ್ರಕಾಶ್ ಬಾರಿಮರದ, ಅರುಣ್ ಕುಮಾರ್, ಆದರ್ಶ್, ಚಂದ್ರಿಬಾಯಿ, ಪ್ರದೀಪ್, ಗಂಗಾಧರ್, ಆನಂದ್, ಗೋಪಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.