ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ 10ನೇ ದಿನವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇಂದು ಭಾನುವಾರದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ನಿನ್ನೆಯವರೆಗೆ 17 ಲಕ್ಷ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಮೂರು ದಿನ ದೇವಿಯ ದರ್ಶನಕ್ಕೆ ಅವಕಾಶವಿದೆ.
ಹಾಸನಾಂಬೆ ದರ್ಶನದಲ್ಲಿ ಕಾಲ್ತುಳಿತದ ಎಚ್ಚರಿಕೆ ಜಿಲ್ಲಾಧಿಕಾರಿಗೆ ಎಸ್ಪಿ ಪತ್ರ ಬರೆದಿದ್ದಾರೆ. ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಪ್ರತಿದಿನವೂ ಲಕ್ಷಾಂತರ ಮಂದಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇದೆ. ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ಹೊರ ಜಿಲ್ಲೆಗಳ ಭಕ್ತರ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಅನಾಹುತವಾದರೆ ನಾವು ಹೊಣೆಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷ ಬಸ್ ಗಳ ವ್ಯವಸ್ಥೆ ರದ್ದು ಮಾಡುವಂತೆ ಜಿಲ್ಲಾಧಿಕಾರಿಗೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಪತ್ರ ಬರೆದಿದ್ದು, ಕಾಲ್ತುಳಿತದ ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 9ರಿಂದ 23ರ ವರೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆದು ಉತ್ಸವ ನಡೆಯುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇರುವುದರಿಂದ ಒಂದು ಸಾವಿರ ರೂಪಾಯಿ, 300 ರೂಪಾಯಿ ಮತ್ತು ಸಾಮಾನ್ಯ ದರ್ಶನದ ಸರತಿ ಸಾಲುಗಳಿಗೆ ಕಲ್ಪಿಸಿರುವ ಸ್ಥಳಾವಕಾಶವನ್ನು ಮೀರಿ ಮೂರ್ನಾಲ್ಕು ಕಿಲೋಮೀಟರ್ ವರೆಗೆ ಹಾಸನ ನಗರದ ಮುಖ್ಯ ರಸ್ತೆಗೆ ಸರತಿ ಸಾಲು ಬಂದಿದೆ.
ಮುಂದಿನ ದಿನಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳಿದ್ದು ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ. ಹಾಸನ ನಗರ ಚಿಕ್ಕದಾಗಿದ್ದು ದೇವಸ್ಥಾನ ಸುತ್ತಮುತ್ತ ಸ್ಥಳಾವಕಾಶ ಕಡಿಮೆ ಇದೆ. ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನಕ್ಕೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಇತರೆ ವಾಹನಗಳಲ್ಲಿ ಆಗಮಿಸಿದಲ್ಲಿ ಎಲ್ಲಾ ರೀತಿಯ ಸರತಿ ಸಾಲಿನಲ್ಲಿ ಜನ ಸಂದಣಿ ಜಾಸ್ತಿಯಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಎಲ್ಲಾ ಸರತಿ ಸಾಲುಗಳಲ್ಲಿ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ ಅಹಿತಕರ ಘಟನೆಗಳು ಜರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಸನಾಂಬ ದೇವಿ ದರ್ಶನ ಸಂಬಂಧ ಹೊರ ಜಿಲ್ಲೆಗಳಿಂದ ಕೆಎಸ್ಆರ್ಟಿಸಿ ಬಸ್ ಮತ್ತು ಇತರೆ ವಾಹನಗಳಲ್ಲಿ ಬರುತ್ತಿರುವ ಭಕ್ತರನ್ನು ನಿಯಂತ್ರಿಸಲು ಕ್ರಮ ವಹಿಸುವಂತೆ ಕೋರಲಾಗಿದೆ.