ಹಾಸನ: ಹಾಸನ ಮಹಾನಗರ ಪಾಲಿಕೆ ಮೇಯರ್ ಚಂದ್ರೇಗೌಡರ ಸದಸ್ಯತ್ವ ಅನರ್ಹಗೊಳಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರ ಕೋರ್ಟ್ ಆದೇಶ ಹೊರಡಿಸಿದೆ.
ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿದ್ದಕ್ಕೆ ಮೇಯರ್ ಚಂದ್ರೇಗೌಡರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ನಗರಸಭೆ ಅಧ್ಯಕ್ಷರಾಗಿದ್ದ ಚಂದ್ರೇಗೌಡ ಅವರು ಮಹಾನಗರ ಪಾಲಿಕೆ ಆದ ಬಳಿಕವೂ ಮೇಯರ್ ಆಗಿ ಮುಂದುವರೆದಿದ್ದರು. ಇದೀಗ ಹಾಸನ ಮಹಾನಗರ ಪಾಲಿಕೆಯ ಮೇಯರ್ ಚಂದ್ರೇಗೌಡರ ಸದಸ್ಯತ್ವ ರದ್ದು ಮಾಡಲಾಗಿದೆ.
ಅಧಿಕಾರ ಹಂಚಿಕೆಯಂತೆ ಅಧ್ಯಕ್ಷ ಸ್ಥಾನ ಬಿಡದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಏಪ್ರಿಲ್ 28ರಂದು ಬಿಜೆಪಿ, ಕಾಂಗ್ರೆಸ್ ಬೆಂಬಲದಿಂದ ಅವರು ಅವಿಶ್ವಾಸ ಗೆದ್ದಿದ್ದರು.
ವಿಪ್ ಉಲ್ಲಂಘಿಸಿದ ಚಂದ್ರೇಗೌಡರ ವಿರುದ್ಧ ಜೆಡಿಎಸ್ ಪಕ್ಷ ಕಾನೂನು ಹೋರಾಟ ನಡೆಸಿತ್ತು. ಜೆಡಿಎಸ್ ಪಕ್ಷದ ಹಾಸನ ಘಟಕದ ಜಿಲ್ಲಾ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಅವರ ದೂರು ಆಧರಿಸಿ ಆಗಸ್ಟ್ 14ರಂದು ಮೇಯರ್ ಚಂದ್ರೇಗೌಡರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ.