ಗದಗ: ಗದಗದಲ್ಲಿ ಚಿನ್ನದ ಅಂಗಡಿಯನ್ನು ದೋಚಿದ್ದ ಗುಜರಾತ್ ನ ಆಮದಾಬಾದ್ ಮೂಲದ ಮೊಹಮದ್ ಹುಸೇನ್ ಸಿದ್ದಿಕಿ(43) ಎಂಬುವನನ್ನು ಕಳ್ಳತನ ನಡೆದ ಆರು ಗಂಟೆಯಲ್ಲಿ ಸಿಲಿಮಿಯ ರೀತಿಯಲ್ಲಿ ಬಂಧಿಸಲಾಗಿದೆ.
ಗದಗ ಜಿಲ್ಲಾ ಪೊಲೀಸರು ಅಂತರ ರಾಜ್ಯ ಕಳ್ಳ ಹುಸೇನ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಎಸ್ಪಿ ಹಾಗೂ ಪೊಲೀಸರ ನೆರವಿನಿಂದ ಚಿನ್ನಾಭರಣ ಕಳ್ಳನನ್ನು ಸೆರೆಹಿಡಿಯಲಾಗಿದೆ.
ಗುಜರಾತ್ ಕಳ್ಳನ ಚಲನವಲದ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ಚಿನ್ನಾಭರಣ ಅಂಗಡಿ ಪಕ್ಕದಲ್ಲಿನ ಲಾಡ್ಜ್ ನಲ್ಲಿ ಸಿದ್ದಿಕಿ ಐದು ದಿನ ತಂಗಿದ್ದ. ಚಿನ್ನದ ಅಂಗಡಿ ಮೇಲಿನ ಭಾಗದ ಗ್ರಿಲ್ ಕತ್ತರಿಸಿ ಒಳ ನುಗ್ಗಿ ನಗ ನಾಣ್ಯ ಲೂಟಿ ಮಾಡಿದ್ದ. ಕೃತ್ಯಕ್ಕಾಗಿ ಗ್ಯಾಸ್ ಕಟರ್, ಹಗ್ಗ, ಸುತ್ತಿಗೆ ಬಳಸಿದ್ದ. ಗುಜರಾತ್ ನ ಕಳ್ಳ ಚಿನ್ನದ ಅಂಗಡಿಯಲ್ಲಿ ಲೂಟಿ ಮಾಡಿದ ಬಳಿಕ ಗದಗದ ಹೊಸ ಬಸ್ ನಿಲ್ದಾಣದ ಹಾಲಿನ ಬೂತ್ ನಲ್ಲಿ ನಂದಿನಿ ಹಾಲು ಕುಡಿದು ಬಸ್ ನಲ್ಲಿ ಹೊರಟಿದ್ದ. ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಕಳ್ಳನ ಚಲನವಲನದ ದೃಶ್ಯ ಸೆರೆಯಾಗಿತ್ತು.
ಅಲ್ಲಿಂದ ಗದಗ –ಪೂನಾ ಬಸ್ ನಲ್ಲಿ ತೆರಳುತ್ತಿದ್ದ ಸಿದ್ದಿಕಿಯ ಫೋಟೋವನ್ನು ಪೊಲೀಸರು ಬಸ್ ಕಂಡಕ್ಟರ್ ಗೆ ಕಳಿಸಿದ್ದಾರೆ. ತಮ್ಮ ಬಸ್ ನಲ್ಲಿ ಕಳ್ಳ ಪ್ರಯಾಣಿಸುತ್ತಿರುವುದನ್ನು ನಿರ್ವಾಹಕ ಖಚಿತಪಡಿಸಿದ್ದರು. ಖಚಿತವಾಗುತ್ತಿದ್ದಂತೆ ಕೊಲ್ಲಾಪುರ ಎಸ್ಪಿಯನ್ನು ಸಂಪರ್ಕಿಸಿದೆ ಗದಗ ಎಸ್ಪಿ ರೋಹನ್ ಕಳ್ಳ ಸಿದ್ದಿಕಿ ಬಂಧಿಸುವಂತೆ ಕೊಲ್ಲಾಪುರ ಎಸ್ಪಿಗೆ ಮನವಿ ಮಾಡಿದ್ದರು.
ಬಸ್ ಅಡ್ಡಗಟ್ಟಿ ಕೊಲ್ಲಾಪುರ ಪೊಲೀಸರು ಸಿದ್ದಿಕಿ ಬಂಧಿಸಿದ್ದಾರೆ. ಮಹಾರಾಷ್ಟ್ರದ ವಡಗಾಂವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಿಕಿ ಬಂಧಿಸಲಾಗಿದೆ.
