ಬೆಂಗಳೂರು: ಬೆಂಗಳೂರು ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರ ಸೂಚನೆಯಂತೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.
ಈ ಮೂಲಕ ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. 2025 -26 ನೇ ಸಾಲಿನ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ ಮುಂದುವರೆಸಲು ಆದೇಶಿಸಲಾಗಿದೆ. ಪ್ರಕ್ರಿಯೆ ಮುಂದುವರೆದ ಬೆನ್ನಲ್ಲೇ ಪಠ್ಯ ಬೋಧನೆ ಉಳಿದರೆ ಯುಜಿಸಿ ವಿದ್ಯಾರ್ಹತೆ ಪಡೆದವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
2025-26 ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದಂತೆ, ಉಲ್ಲೇಖಿತ ಏಕ ಕಡತದಲ್ಲಿ ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಮಾನ್ಯ ಹೆಚ್ಚುವರಿ ಅಡ್ವಕೆಟ್ ಜನರಲ್ ರವರು ನೀಡಿರುವ ಕಾನೂನು ಅಭಿಪ್ರಾಯದಂತೆ, ರಿಟ್ ಅಪೀಲು ಸಂಖ್ಯೆ:1578/2024 ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:09-09-2025 ರಂದು ನೀಡಿರುವ ಮಧ್ಯಂತರ ಆದೇಶದ ಅವಲೋಕನೆಗಳಿಗೆ ಒಳಪಟ್ಟು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರೆಸಲು ಹಾಗೂ ಈ ರೀತಿ ಮುಂದುವರಿಕೆ ನಂತರವೂ ಕಾರ್ಯಭಾರವಿದ್ದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ, ಮಾನ್ಯ ನ್ಯಾಯಾಲಯದ ಮಧ್ಯಂತರ ಆದೇಶದನುಸಾರ, ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯು.ಜಿ.ಸಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ.
