ಕೊಪ್ಪಳ: ಜನರ ಅನುಕೂಲಕ್ಕಾಗಿ ರಾಜ್ಯದಲ್ಲಿ ಎರಡು ಸಾವಿರ ಬಸ್ ಗಳನ್ನು ಖರೀದಿಸಲಾಗುತ್ತಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 600 ರಿಂದ 700 ಬಸ್ ಗಳನ್ನು ಕೊಡುತ್ತೆವೆ ಎಂದು ಸಾರಿಗೆ ಮತ್ತು ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ ಹಾಗೂ ಲೋಕೋಪಯೋಗಿ ಇಲಾಖೆಯ ಸರ್ಕಿಟ್ ಹೌಸ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಬ್ಬ-ಹರಿ ದಿನಗಳ ಸಂದರ್ಭ ಹಾಗೂ ಶಾಲಾ-ಕಾಲೇಜುಗಳ ಮಕ್ಕಳಿಗೆ ಹೊಸದಾಗಿ ಬಸ್ ಖರೀದಿಸುವದರಿಂದ ಅವರು ದಿನಾಲು ಸಂಚಾರ ಮಾಡಲು ಅನುಕೂಲವಾಗುವದರ ಜೊತೆಗೆ ಬಸ್ ಗಳ ಕೊರತೆ ನೀಗಿಸಿದಂತಾಗುತ್ತದೆ. ಯಲಬುರ್ಗಾ ಕ್ಷೇತ್ರದಲ್ಲಿ 16 ಬಸ್ ನಿಲ್ದಾಣಗಳನ್ನು ಕಟ್ಟುತ್ತಿದ್ದೆವೆ. ಇಂದು ಬೇವೂರು ಹಾಗೂ ಹಿರೇವಂಕಲಕುಂಟಾ ನೂತನ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇನೆ ಎಂದರು.
ಕೊಪ್ಪಳ-ಬೆಂಗಳೂರು ಹಾಗೂ ಕೊಪ್ಪಳ-ಬೀದರ್ ಜಿಲ್ಲೆಗಳಿಗೆ ಬರುವ ಕೆಲವೇ ದಿನಗಳಲ್ಲಿ ನಾನ್ ಎಸಿ ಸ್ಲೀಪರ್ ಬಸ್ ಗಳನ್ನು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹುಲಿಗೆಮ್ಮ ದೇವಸ್ಥಾನ ಪ್ರಾಧಿಕಾರ ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಹುಣ್ಣುಮೆ ಸಂದರ್ಭದಲ್ಲಿ ಅಲ್ಲಿಗೆ ಒಂದು ಲಕ್ಷಕಿಂತ ಹೆಚ್ಚು ಜನರು ಭೇಟಿ ನೀಡುತ್ತಾರೆ. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಮಲಗುತ್ತಾರೆ. ಹಾಗಾಗಿ ಪ್ರಾಧಿಕಾರದಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಹೇಳಿದರು.
ಅಂಜನಾದ್ರಿಗೆ ಹಿಂದಿನ ಸರ್ಕಾರ 19 ಕೋಟಿ ಅನುದಾನ ನೀಡಿತ್ತು. ನಮ್ಮ ಸರ್ಕಾರ ಬಂದ ಮೇಲೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರವಾಸಿ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣಾ ಪಥ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಲಿಸುವ ಮೂಲಕ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಬೇವೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂದಮ್ಮ ಗವಿಸಿದ್ದಪ್ಪ ಬಳಿಗಾರ, ಜಿಲ್ಲಾಧಿಕಾರಿ ನಲಿನ್ ಅತುಲ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವ್ಯವಸ್ಥಾಪಕ ನಿರ್ದೆಶಕ ರಾಚಪ್ಪ ಎಂ., ಕಲಬುರಗಿ ಮುಖ್ಯ ಕಾಮಗಾರಿ ಅಭಿಯಂತರಾದ ಚನ್ನನ ಬೋರಯ್ಯ. ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಮ್.ವೆಂಕಟೇಶ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರಾದ ಹೇಮಂತ್, ಕೊಪ್ಪಳ ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ ಉಪಸ್ಥಿತರಿದ್ದರು.