ಶಿವಮೊಗ್ಗ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ ಶಿವಮೊಗ್ಗದ ಶರಾವತಿ ನಗರದಲ್ಲಿ ನಡೆದಿದೆ.
ಶರಾವತಿ ನಗರದ ಒಂದನೇ ಅಡ್ಡರಸ್ತೆಯ ಸುನ್ನಿ ಮಸೀದಿ ಪಕ್ಕದ ಓಣಿಯಲ್ಲಿದ್ದ ಪೀರಾನ್ ಸಾಬ್ ಎಂಬುವರ ಮನೆಯಲ್ಲಿ ಇಂದು ಸಂಜೆ ಸಿಲಿಂಡರ್ ಸ್ಪೋಟವಾಗಿದೆ. ಈ ವೇಳೆ ಮನೆಯಲ್ಲಿದ್ದ ಎಂ.ಬಿ. ಪೀರಾನ್ ಸಾಬ್, ಅವರ ಪತ್ನಿ ಸಾಹೇರಾ ಮತ್ತು ಸೊಸೆ ಜಯೇಬಾ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದ ತೀವ್ರತೆಗೆ ಮನೆಯ ಛಾವಣಿ ಹಾರಿ ಹೋಗಿದ್ದು ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿವೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.